ಹೂವಿನಹಡಗಲಿ: ಇಂದಿನ ಯಾಂತ್ರೀಕೃತ ಜೀವನದ ಜಂಜಾಟದಲ್ಲಿ ಮಾನವೀಯ ಮೌಲ್ಯಗಳು ಬದುಕಿಗೆ ದಾರಿದೀಪವಾಗುತ್ತದೆ ಎಂದು ಜ್ಞಾನೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಹೇಳಿದರು.
ಪಟ್ಟಣದ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಜ್ಞಾನ ಬೆಳಕು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ತರಬೇತಿ ಶಿಬಿರಗಳು ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಬೆಳೆಸುವ ಕಾರ್ಯವನ್ನು ಅಕಾಡೆಮಿ ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.ವಿದ್ಯಾರ್ಥಿಗಳು ಸತತ ಅಧ್ಯಯನ ನಡೆಸಿ ಹೆತ್ತವರಿಗೆ ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ತಾಲೂಕು ದೈಹಿಕ ಪರಿವೀಕ್ಷಕ ರಫಿ ಅಹಮದ್ ಕವಾಸ್ ಮಾತನಾಡಿ, ಬೇಸಿಗೆ ರಜೆ ಸದುಪಯೋಗಪಡಿಸಿಕೊಂಡು ಮಕ್ಕಳು ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿರುವುದು ಸಂತಸದ ವಿಷಯ. ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಆತ್ಮವಿಶ್ವಾಸವೂ ಅಗತ್ಯ ಎಂದರು.ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಸುರೇಶ ಅಂಗಡಿ ಮಾತನಾಡಿ, ಸಾವಿತ್ರಿಬಾಯಿ ಫುಲೆ, ಮೇಡಂ ಕ್ಯೂರಿ ಸಾಧಕರ ಸಾಧನೆ ನಿಮಗೆ ಸ್ಫೂರ್ತಿ ಆಗಲಿ ಎಂದರು.
ಎಸ್‌ಎಂಎನ್ ಫೌಂಡೇಶನ್‌ನ ಎಸ್.ಎಂ. ಶಿವರಾಜ್ ಮಾತನಾಡಿ, ತಮ್ಮ ಸಂಸ್ಥೆಯ ಮೂಲಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಬಾಹುಬಲಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕಿರಣ್ ಕುಮಾರ್ ಜೈನ್, ಪಟ್ಟಣ ಶಿಕ್ಷಣ ಸಂಯೋಜಕ ವೀರೇಶ್ ಬಗಲಿ ಮಾತನಾಡಿದರು.
ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ಯೋಗ, ಚಿತ್ರಕಲೆ, ಭಾಷಣ, ನೃತ್ಯ, ಹಾಡು, ಕ್ವಿಜ್ ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಾಸ ಚಟುವಟಿಕೆ ನಡೆಸಲಾಯಿತು.ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 2025 -26ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಧಾ ಜಿ., ಅಪ್ಸನಾ ಎಸ್., ಅನುಪಮಾ ಐ., ಮಮತಾ ಇನ್ನಿತರ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜ್ಞಾನ ಬೆಳಕು ಅಕಾಡೆಮಿಯ ಸದಸ್ಯ ವಿಜಯ್ ಲಿಂಗದಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ್ ಸೊಪ್ಪಿನ್ ಶಿಬಿರದ ಸಾಧಕಗಳ ಬಗ್ಗೆ ಮಾತನಾಡಿದರು. ಅಕಾಡೆಮಿಯ ವಿಶ್ವನಾಥ ಬಾರಿಕರ, ಲೋಕೇಶ್ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ವೀಣಾ ಡಿ., ರೇಖಾ ಎಂ., ಮಂಜುಳಾ ಜಾಡರ್ ಮತ್ತು ನಿಂಗಪ್ಪ ಭೇಟಿ ನೀಡಿದರು. ಆನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.