ಬಳ್ಳಾರಿ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು.ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ಪ್ರದರ್ಶನ-2026 ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಜ್ಞಾನಕ್ಕಷ್ಟೇ ಸೀಮಿತವಾಗದೆ, ತಂತ್ರಜ್ಞಾನ ಬಳಕೆ, ಕೌಶಲ್ಯಾಭಿವೃದ್ಧಿ, ಸಂಶೋಧನಾ ಮನೋಭಾವ ಮೈಗೂಡಿಸಿಕೊಂಡಲ್ಲಿ ಮಾತ್ರ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು.ಕೃತಕ ಬುದ್ಧಿಮತ್ತೆ, ಡಿಜಿಟಲ್ ಲರ್ನಿಂಗ್, ಆನ್‌ಲೈನ್ ತರಗತಿ, ವರ್ಚುವಲ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆಗಳನ್ನು ವಿಶ್ವವಿದ್ಯಾಲಯಗಳಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ಒದಗಿಸಬಹುದಾಗಿದೆ. ತಂತ್ರಜ್ಞಾನ ಆಧರಿತ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳ ಬಗ್ಗೆ ಆಸಕ್ತಿ ಹೆಚ್ಚುವುದರ ಜತೆಗೆ ಉದ್ಯೋಗಾವಕಾಶಗಳಿಗೂ ನೆರವಾಗಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿದರೆ ಮಾತ್ರ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ ಎಂದರು.
ಜಿಪಂ ಸಿಇಒ ಮೊಹ್ಮದ್ ಹಾರಿಸ್ ಸುಮೈರ್ ಮಾತನಾಡಿ, ವಿಜ್ಞಾನವು ಶೋಧನೆ, ಕ್ರಿಯಾತ್ಮಕ ವಿಚಾರಗಳಿಗೆ ವೇದಿಕೆಯಾಗಿದೆ. ವಿಜ್ಞಾನ ಬೆಳೆದಷ್ಟು ಸವಾಲುಗಳು ಸಾಕಷ್ಟು ಉದ್ಭವಿಸುತ್ತವೆ. ರಾಮನ್ ಪರಿಣಾಮವನ್ನು ಹಲವಾರು ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಶೋಧನಗಳಲ್ಲಿ ಎಲ್ಲರೂ ಹೆಚ್ಚಾಗಿ ಭಾಗಿಯಾಗಬೇಕು ಎಂದು ತಿಳಿಸಿದರು.ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ವಿಜ್ಞಾನವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ. ವಿಜ್ಞಾನ ಆಧರಿತ ಪ್ರಯೋಗಗಳು ಮಾನವೀಯತೆಗೆ ಮಾರಕವಾಗಬಾರದು. ವಿದ್ಯಾರ್ಥಿಗಳು ತಮ್ಮಲ್ಲಿರುವ ನವೀನ ವಿಚಾರಧಾರೆಗಳನ್ನು ತಮ್ಮ ಸಂಶೋಧನೆಗಳಾಗಿ ಮಾರ್ಪಡಿಸಬೇಕು. ಈ ಮಾದರಿಯ ಮೇಳವು ವಿದ್ಯಾರ್ಥಿ, ಶಿಕ್ಷಕರ ವೈಜ್ಞಾನಿಕ ಚಟುವಟಿಕೆಗಳನ್ನು ಅನಾವರಣಗೊಳಿಸುವ ಮೂಲಕ ಅವರಲ್ಲಿ ಹೊಸ ಆಸಕ್ತಿ, ಅನ್ವೇಷಣೆ, ವಿಚಾರಗಳು ಆಳವಾಗಿ ಬೇರೂರುವಂತೆ ಮಾಡುತ್ತವೆ. ನೂತನ ಅನ್ವೇಷಣೆ, ಸಕಾರಾತ್ಮಕ ಚಿಂತನೆ, ಧನಾತ್ಮಕ ವಿಚಾರಗಳಿಗೆ ಮಾತ್ರ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿದರು.
ಅನ್ವಯಿಕ ವಿಜ್ಞಾನ ನಿಕಾಯದ ಡೀನ್ ಪ್ರೊ.ಹನುಮೇಶ ವೈದ್ಯ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಂದ ನಿರ್ಮಿತವಾದ ವೆಬ್‌ಸೈಟ್ ಮಾದರಿ (ಎಐ ಇಂಟಿಗ್ರೇಟೆಡ್ ಡೈನಾಮಿಕ್ ಮಾಡೆಲ್), ಬೆಸ್ಟ್ ಆಫ್ ಬಳ್ಳಾರಿ ಹಾಗೂ ಆಸ್ಕ್ ವಿಎಸ್‌ಕೆಯು (ವಿಎಸ್‌ಕೆಯು ಚಾಟ್ ಜಿಪಿಟಿ) ಗಳನ್ನು ಗಣ್ಯರು ಅನಾವರಣಗೊಳಿಸಿದರು.
ವಿವಿಯ ಎಲ್ಲ ವಿಜ್ಞಾನ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 100ಕ್ಕೂ ಅಧಿಕ ವೈವಿಧ್ಯಮಯ ವಿಜ್ಞಾನ ಪ್ರಯೋಗಗಳ ಪ್ರದರ್ಶನದಲ್ಲಿದ್ದವು.ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ. ಸಾಲಿ, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ಅನ್ವಯಿಕ ವಿಜ್ಞಾನ ನಿಕಾಯದ ಶುದ್ಧ ವಿಜ್ಞಾನ ನಿಕಾಯದ ಡೀನ್ ಪ್ರೊ.ಉದಯಕುಮಾರ್ ಖಡ್ಕೆ, ಕಾರ್ಯಕ್ರಮದ ಸಹ ಸಂಚಾಲಕ ಡಾ.ಪಿ.ಶರತಕುಮಾರ ಉಪಸ್ಥಿತರಿದ್ದರು.
ಡಾ.ಸಿದ್ದೇಶ್ವರಿ, ಸಂಚಾಲಕ ಪ್ರೊ.ಜೆ.ತಿಪ್ಪೇರುದ್ರಪ್ಪ, ಕುಲಸಚಿವ ಪ್ರೊ.ವಿ.ಲೋಕೇಶ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.