ಬಳ್ಳಾರಿ: ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ಸರ್ಕಾರದ ಹುನ್ನಾರ ಖಂಡಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನಾ ಧರಣಿ ನಡೆಸಲಾಯಿತು.
ಜನಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಲ್ಲಿ ಸಾವಿರಾರು ಆಶಾಗಳನ್ನು ವಜಾಗೊಳಿಸಲು ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ನಿರ್ಧರಿಸಿದೆ. ಆರೋಗ್ಯ ಇಲಾಖೆಯ ಈ ನಿರ್ಧಾರವು ಆಶಾಗಳಿಗೆ ಘೋರ ಆಘಾತ ತಂದಿದೆ. ಇದೇ ವೃತ್ತಿಯನ್ನು ನಂಬಿರುವ ಆಶಾ ಮತ್ತವರ ಕುಟುಂಬಗಳು ಬೀದಿಗೆ ಬರುವ ಆತಂಕ ಎದುರಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈ ಬಿಡುವ ಯೋಜನೆ ಈಗಾಗಲೇ ಸಿದ್ಧವಾಗಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ. ಈ ಕ್ರಮವು ಕೇಂದ್ರದ ಮಾರ್ಗಸೂಚಿಯ ಉಲ್ಲಂಘನೆ ಆಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಇಂತಹ ಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ. ಕೈಬಿಟ್ಟ ಆಶಾಗಳನ್ನು ನಿಯಮಾನುಸಾರ ‘ಡಿ’ ಗ್ರೂಪ್ ನೌಕರರನ್ನಾಗಿ ತೆಗೆದುಕೊಳ್ಳಲಾಗುವುದು ಎನ್ನುವುದು ಕೇವಲ ಬಾಯಿಮಾತಿನ ಹೇಳಿಕೆ ಅಷ್ಟೇ. ಸಾವಿರಾರು ಆಶಾಗಳನ್ನು ವಜಾಗೊಳಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದು ಧರಣಿ ನಿರತರು ದೂರಿದರು.ಅನಿರ್ದಿಷ್ಟಾವಧಿ ಧರಣಿಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹಾಗೂ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಕಷ್ಟಪಡುತ್ತಿದ್ದರೂ ಗೌರವ ಘನತೆಯಿಂದ ಬದುಕುವ ವೇತನದಿಂದ ಸಂಪೂಣವಾಗಿ ಕಡೆಗಣಿಸಲ್ಪಟ್ಟಿದ್ದಾರೆ. ಆರ್‌ಸಿಎಚ್ ಪೋರ್ಟಲ್‌ನ ಸಮಸ್ಯೆಯಿಂದಾಗಿ, ಅವರಿಗೆ ದುಡಿದಷ್ಟು ವೇತನ ಬರುತ್ತಿಲ್ಲ. ಹೋದ ವರ್ಷ ಜನವರಿಯಲ್ಲಿ ರಾಜ್ಯಮಟ್ಟದ ಹೋರಾಟದ ಸಂದರ್ಭದಲ್ಲಿ ಮುಖಮಂತ್ರಿ ಪ್ರತಿ ಆಶಾಗೆ ಕನಿಷ್ಠ ₹10 ಸಾವಿರ ಮಾಸಿಕ ಗೌರವಧನ ನೀಡುವ ಭರವಸೆ ನೀಡಿದ್ದರು. ಇಲ್ಲಿಯವರೆಗೂ ಭರವಸೆ ಈಡೇರಿಸಲಿಲ್ಲ. ಇದರ ಬದಲು ಮೌಲ್ಯಮಾಪನ, ತರ್ಕಬದ್ಧಗೊಳಿಸುವ ಹೆಸರಲ್ಲಿ ಜನ ಸಂಖ್ಯೆಯ ಮಿತಿಯನ್ನು ಹೆಚ್ಚಿಸಿ, ಆಶಾಗಳನ್ನು ಕೈಬಿಡಲು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹೊರಟಿದೆ. ಇದು ಅತ್ಯಂತ ಅಮಾನವೀಯ ಕ್ರಮವಾಗಿದೆ. ಆಶಾಗಳ ಹೋರಾಟವನ್ನು ಹತ್ತಿಕ್ಕುವ ಕ್ರಮವಾಗಿದೆ ಎಂದರು.
ಆಶಾ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಎ.ಶಾಂತಾ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಅವರು ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷೆ ಎಂ.ಗೀತಾ ಅವರು ಸರ್ಕಾರ ಆಶಾಗಳಿಗೆ ಉದ್ಯೋಗ ರಕ್ಷಣೆಯ ಭರವಸೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.ಮುಖಂಡರಾದ ಸುರೇಶ್, ಮಾಣಿಕ್ಯಮ್ಮ, ರೇಷ್ಮಾ, ರಾಮಕ್ಕ, ಜಲಜಾಕ್ಷಿ, ಪಾವನಿ, ಈರಮ್ಮ, ಕವಿತಾ ಮತ್ತಿತರರಿದ್ದರು.
ಮನವಿ ಸ್ವೀಕರಿಸಿದ ಜಿಪಂ ಸಿಇಒ ಹಾಗೂ ಅಪರ ಜಿಲ್ಲಾಧಿಕಾರಿ ಮಾತನಾಡಿ, ಆಶಾಗಳನ್ನು ಸೇವೆಯಿಂದ ತೆಗೆದುಹಾಕುವ ಯಾವುದೇ ಉದ್ದೇಶವಿಲ್ಲ. ಈಗಿರುವ ಜನಸಂಖ್ಯೆಯೊಂದಿಗೆ ಹೊಂದಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಈ ಕುರಿತು ಮಾರ್ಚ್ 23ರಂದು ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಒಂದು ವೇಳೆ ಒಬ್ಬೇ ಒಬ್ಬ ಆಶಾ ಕಾರ್ಯಕರ್ತೆಯನ್ನು ಸೇವೆಯಿಂದ ತೆಗೆದು ಹಾಕಿದ್ದೇ ಆದಲ್ಲಿ ಮಾರ್ಚ್ 25 ರಿಂದ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲಾಗುವುದು ಎಂದು ಸಂಘಟನೆಯ ಪ್ರಮುಖರು ಜಿಲ್ಲಾಡಳಿತಕ್ಕೆ ತಿಳಿಸಿದರು.