ಗರ್ಭಿಣಿಯರಿಗೆ ವಿತರಿಸಬೇಕಾಗಿದ್ದ ನೂರಾರು ಕ್ವಿಂಟಲ್‌ ಅಕ್ಕಿ ಹಾಳು

| Published : Jun 21 2024, 01:07 AM IST

ಸಾರಾಂಶ

ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಾಗಿದ್ದ ನೂರಾರು ಕ್ವಿಂಟಲ್ ಅಕ್ಕಿ ಮುಂಡರಗಿ ಪಟ್ಟಣದ ಎಂಎಸ್‌ಪಿಸಿ ಗೋದಾಮಿನಲ್ಲಿ ಹಾಳಾಗಿವೆ. ಈ ಅಕ್ಕಿಯನ್ನು ವಿತರಿಸದಂತೆ ತಹಸೀಲ್ದಾರ್‌ ಧನಂಜಯ ಮಾಲಗತ್ತಿ ಸೂಚಿಸಿದ್ದಾರೆ.

ಮುಂಡರಗಿ: ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸಬೇಕಾಗಿದ್ದ ನೂರಾರು ಕ್ವಿಂಟಲ್ ಅಕ್ಕಿ ಇದೀಗ ಅಂಗನವಾಡಿ ಸೇರುವ ಮೊದಲೇ ಮುಂಡರಗಿ ಪಟ್ಟಣದ ಎಂಎಸ್‌ಪಿಸಿ ಗೋದಾಮಿನಲ್ಲಿ ಹುಳುಗಳ ಪಾಲಾಗಿ, ಗಬ್ಬೆದ್ದು ನಾರುತ್ತಿರುವುದು ಬುಧವಾರ ಬೆಳಕಿಗೆ ಬಂದಿದೆ.

ಈ ಗೋದಾಮಿನಲ್ಲಿರುವ ಅಕ್ಕಿ ಎಂಎಸ್‌ಪಿಸಿ ಸಂಸ್ಥೆಗೆ ಸೇರಿದ್ದು. ಈ ಹಿಂದೆ ತಾವು ಸರಬರಾಜು ಮಾಡಬೇಕಾದ ಅಂಗನವಾಡಿಗಳಲ್ಲಿ ಆಯಾ ತಿಂಗಳಿನಲ್ಲಿ ಮಕ್ಕಳ ಸಂಖ್ಯೆಗಳು ಹಾಗೂ ಗರ್ಭಿಣಿಯರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಅಕ್ಕಿಯನ್ನು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕಳೆದ ಕೆಲವು ತಿಂಗಳಿಂದ ಆಹಾರ ಧಾನ್ಯ ಸರಬರಾಜುದಾರರು ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಗೋದಾಮಿನಲ್ಲಿ ಆಹಾರ ಧಾನ್ಯ ಸಂಗ್ರಹಿಸಿದ್ದು, ಮೊದಲಿನ ಗೋದಾಮಿನಲ್ಲಿದ್ದ ಆಹಾರ ಧಾನ್ಯಗಳು ಹಾಳಾಗಿವೆ. ಈ ಗೋದಾಮಿನಲ್ಲಿ ಕಿಟಕಿ ಮುಚ್ಚಿ ಗಾಳಿ ಪ್ರವೇಶಿಸದಂತೆ ಬಂದೋಬಸ್ತ್‌ ಮಾಡಲಾಗಿತ್ತು. ಆದರೆ ಯಾರೋ ಕಿಟಕಿಗೆ ಬಡಿದ ಹಲಗೆಯನ್ನು ಮುರಿದು‌ ತೆಗೆದಿದ್ದಾರೆ. ಹೀಗಾಗಿ ಗಾಳಿ ಹೊಕ್ಕು ಅಲ್ಲಿದ್ದ ಎಲ್ಲ ಅಕ್ಕಿ ಚೀಲಗಳಿಗೂ ಹುಳು ಹತ್ತಿ, ಬೂಸ್ಟ್‌ ಹಿಡಿದು ಗಬ್ಬು ನಾರುತ್ತಿದೆ. ಈ ಅಕ್ಕಿಯನ್ನು ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಗೋದಾಮಿನಲ್ಲಿ ಹುಳು ಹಿಡಿದ ಅಕ್ಕಿ ತಮ್ಮ ಇಲಾಖೆಗೆ ಸಂಬಂಧಪಟ್ಟಿದ್ದಲ್ಲ ಎಂದು ಮುಂಡರಗಿ ಸಿಡಿಪಿಒ ಇಲಾಖೆ ಸ್ಪಷ್ಟಪಡಿಸಿದೆ. ಸ್ಥಳಕ್ಕೆ ತಹಸೀಲ್ದಾರ್ ಧನಂಜಯ ಮಾಲಗತ್ತಿ ಭೇಟಿ ನೀಡಿ ಪರಿಶೀಲಿಸಿದ್ದು, ಇದು ಎಂಎಸ್‌ಪಿಸಿ ಸಂಸ್ಥೆಗೆ ಸೇರಿದ ಅಕ್ಕಿಯಾಗಿದೆ. ಸಿಡಿಪಿಒ ಅವರನ್ನು ವಿಚಾರಿಸಿದಾಗ ಅವರು ತಮ್ಮದಲ್ಲ ಎಂದು ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ. ಈ ಅಕ್ಕಿ ಸಂಪೂರ್ಣವಾಗಿ ಹಾಳಾಗಿರುವುದರಿಂದ ಎಲ್ಲಿಯೂ ವಿತರಿಸದಂತೆ ಎಂಎಸ್‌ಪಿಸಿ ಸಂಸ್ಥೆಗೆ ಸೂಚಿಸಲಾಗಿದೆ. ಆಹಾರ ನಿರೀಕ್ಷಕರನ್ನು ಸ್ಥಳದಲ್ಲಿಯೇ ಬಿಡಲಾಗಿದೆ ಎಂದು ಹೇಳಿದ್ದಾರೆ.