ಕನ್ನಡಪ್ರಭ ವಾರ್ತೆ ಮಂಡ್ಯ

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಎಚ್ಚರ. ಕಳ್ಳತನ, ಫುಟ್‌ಬೋರ್ಡ್ ಪ್ರಯಾಣ, ಲಗೇಜ್ ಬಗ್ಗೆ ನಿಗಾ ಇರಲಿ, ಕಿಟಕಿ ಪಕ್ಕ ಮಲಗಿದ್ದಾಗ ಜಾಗೃತೆ ವಹಿಸಿ, ಮೊಬೈಲ್ ಬಳಸದೆ ಎಚ್ಚರಿಕೆಯಿಂದ ಪ್ರಯಾಣ ಮಾಡಿ.

- ಹೀಗೆ ಶುಕ್ರವಾರ ಮಂಡ್ಯ ರೈಲು ನಿಲ್ದಾಣದಲ್ಲಿ ಬೆಂಗಳೂರಿನ ರೈಲ್ವೆ ಸುರಕ್ಷತಾ ಪಡೆ ಪ್ರಯಾಣಿಕರಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಫೋರ್ಸ್‌ನ ಎಎಸ್‌ಐ ಬಸವರಾಜ್ ಹೊಟ್ಟಾರ್ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ರೈಲ್ವೆ ಪೊಲೀಸರು ನಿಲ್ದಾಣದ ಫ್ಲಾಟ್‌ಫಾಂರಂಗಿಳಿದು ಪ್ರಯಾಣಿಕರಿಗೆ ಅಪಘಾತ ಹಾಗೂ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.

ಮಹಿಳೆಯರು ಕಿಟಕಿ ಪಕ್ಕ ಕುಳಿತ ವೇಳೆ ತಮ್ಮ ಚಿನ್ನಾಭರಣ ಸೇರಿ ಮೊಬೈಲ್ ಮೇಲೆ ಎಚ್ಚರಿಕೆ ವಹಿಸಬೇಕು. ಕಳ್ಳರು ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಹಾಗಾಗಿ ಜಾಗೃತರಾಗಿರುವಂತೆ ಸಲಹೆ ನೀಡಿದರು. ಪ್ರಯಾಣಿಕರು ಸುರಕ್ಷಿತ ಪ್ರಯಾಣಕ್ಕಾಗಿ ರೈಲ್ವೆ ನಿಯಮಗಳನ್ನು ಪಾಲಿಸಬೇಕು ಮತ್ತು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸೂಚನೆ ನೀಡಿದರು.

ರೈಲಿನಲ್ಲಿ ಪ್ರಯಾಣಿಸುವಾಗ ಅಪರಿಚಿತರು ನೀಡುವ ಬಿಸ್ಕತ್ತು, ಚಾಕೋಲೇಟ್ ಅಥವಾ ಪಾನೀಯಗಳನ್ನು ಎಂದಿಗೂ ಸೇವಿಸಬೇಡಿ. ಇವುಗಳಲ್ಲಿ ಮಾದಕ ದ್ರವ್ಯ ಬೆರೆಸಿ ನಿಮ್ಮನ್ನು ಪ್ರಜ್ಞೆ ತಪ್ಪಿಸಿ ಲೂಟಿ ಮಾಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದರು.


ನಿಮ್ಮ ಲಗೇಜ್‌ಗಳನ್ನು ಸೀಟಿನ ಕೆಳಗೆ ಇಟ್ಟು ಸರಪಳಿ ಹಾಕಿ ಬೀಗ ಹಾಕಿರಿ. ಕಿಟಕಿ ಪಕ್ಕ ಕುಳಿತು ಫೋನ್ ಬಳಸುವಾಗ ಮೊಬೈಲ್ ಕಳ್ಳರ ಬಗ್ಗೆ ಎಚ್ಚರವಿರಲಿ ಎಂದು ಸಲಹೆ ನೀಡಿದರು.

ಭಾರತೀಯ ರೈಲ್ವೆಯು ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿ ತಡೆಯಲು ಕವಚ್ ಎಂಬ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದೆ. ಇದು ತಾಂತ್ರಿಕವಾಗಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈಗ ಬಹುತೇಕ ರೈಲು ನಿಲ್ದಾಣಗಳು ಮತ್ತು ಪ್ರಮುಖ ರೈಲುಗಳ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸದಾ ನಿಗಾ ಇಡಲಾಗುತ್ತದೆ. ಆದರೂ ಸಹ ಪ್ರಯಾಣಿಕರು ಜಾಗರೂಕರಾಗಿದ್ದರೆ ಅಪರಾಧಗಳನ್ನು ಶೂನ್ಯಕ್ಕೆ ಇಳಿಸಬಹುದು ಎಂದು ತಿಳಿಸಿದರು.

ಎಎಸ್‌ಐ ಇ. ಕೃಷ್ಣ, ಯಶವಂತಪುರ ಮಹಿಳಾ ಹೆಡ್ ಪೊಲೀಸ್ ಪೇದೆ ನವ್ಯ ಕೆ.ಎಲ್. ಗೌಡ ಹಾಗೂ ಮಂಡ್ಯ ಆರ್‌ಪಿಎಫ್ ಸಿಬ್ಬಂದಿ ಹಾಜರಿದ್ದರು.