ಮುನಿರತ್ನರನ್ನು ಜೈಲಿನಲ್ಲೇ ಇಡಲು ಹುನ್ನಾರ: ಸಿ.ಟಿ. ರವಿ

| Published : Sep 20 2024, 01:34 AM IST

ಮುನಿರತ್ನರನ್ನು ಜೈಲಿನಲ್ಲೇ ಇಡಲು ಹುನ್ನಾರ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬಿಜೆಪಿ ಶಾಸಕ ಮುನಿರತ್ನ ಅವರನ್ನು ಏನಾದರೂ ಮಾಡಿ ಜೈಲಿನಲ್ಲಿ ಇಡಬೇಕೆಂದು ಕಾಂಗ್ರೆಸ್ ನಾಯಕರು ಯೋಚಿಸುತ್ತಿದ್ದಾರೆ. ಇದಕ್ಕಾಗಿಯೇ ದಿನಕ್ಕೊಂದು ಪ್ರಕರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧನ । ಈ ರೀತಿ ದ್ವೇಷದ ರಾಜಕಾರಣ ಮಾಡಿದವರು ಕಳೆದು ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಿಜೆಪಿ ಶಾಸಕ ಮುನಿರತ್ನ ಅವರನ್ನು ಏನಾದರೂ ಮಾಡಿ ಜೈಲಿನಲ್ಲಿ ಇಡಬೇಕೆಂದು ಕಾಂಗ್ರೆಸ್ ನಾಯಕರು ಯೋಚಿಸುತ್ತಿದ್ದಾರೆ. ಇದಕ್ಕಾಗಿಯೇ ದಿನಕ್ಕೊಂದು ಪ್ರಕರಣವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಕಾಂಗ್ರೆಸ್ ನಲ್ಲಿ ಇದ್ದಾಗ ಒಳ್ಳೆಯವರಾಗಿದ್ದರು. ಆದರೆ ಬಿಜೆಪಿಗೆ ಬಂದಿದ್ದರಿಂದಾಗಿ ಕೆಟ್ಟವರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಬಳಿಕ ಈ ಎಲ್ಲ ಸಮಸ್ಯೆಗಳು ಪ್ರಾರಂಭವಾಗಿವೆ ಎಂದು ದೂರಿದರು.

ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ಈ ರೀತಿ ದ್ವೇಷದ ರಾಜಕಾರಣ ಮಾಡಿದವರು ಕಳೆದು ಹೋಗಿದ್ದಾರೆ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಕೊಡುವುದು ಬೇರೆ. ಅದೇ ದುರುದ್ದೇಶಪೂರ್ವಕವಾಗಿ ತೊಂದರೆ ಕೊಡುವುದು ಬೇರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಯಿತು. ಅದೇ ಶಾಸಕ ಚೆನ್ನಾರೆಡ್ಡಿ ಮೇಲೆ ಪ್ರಕರಣ ದಾಖಲಾಗಿ 100 ದಿನ ಕಳೆದರೂ ಬಂಧನವಾಗಿಲ್ಲ. ಇದೆಲ್ಲವನ್ನು ಗಮನಿಸಿದರೆ ಮುನಿರತ್ನ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ ಎಂಬ ಅನುಮಾನ ಮೂಡುತ್ತದೆ. ಕಾಂಗ್ರೆಸ್ ನಾಯಕರು ಈ ರೀತಿಯ ಕನಸನ್ನೇನಾದರೂ ಕಂಡಿದ್ದರೆ ಅದು ಕನಸಷ್ಟೆ ಎಂದು ಹೇಳಿದರು.ಅಶೋಕ್ ಮೇಲಿನ ಪ್ರಕರಣಕ್ಕೆ ಆಕ್ರೋಶ

ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಪಕ್ಷ ನಾಯಕ ಆರ್ .ಅಶೋಕ್ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ಗಣಪತಿ ಪ್ರತಿಷ್ಠಾಪಿಸಿದವರ ಮೇಲೆಯೇ ಎಫ್ಐಆರ್ ಮಾಡಿದ ಪುಣ್ಯಾತ್ಮರು ಇವರು. ಆ ಬಳಿಕ ಪೆಟ್ರೋಲ್ ಬಾಂಬ್ ಹಾಕಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಪೆಟ್ರೋಲ್ ಬಾಂಬ್ ಹಾಕಿದ್ದಕ್ಕಿಂತಲೂ ಗಣಪತಿ ಕೂರಿಸಿದ್ದೆ ತಪ್ಪು ಎನ್ನುವ ಮನಸ್ಥಿತಿ ಇದೆ ಎಂದು ದೂರಿದರು.

ಮುಂದೆ ಎಲ್ಲರೂ ಬುರ್ಖ ಹಾಕಿದರೆ ಲವ್ ಜಿಹಾದ್ ಪ್ರಶ್ನೆಯೇ ಬರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಬಹುದು. ಇಂತಹ ಮಾನಸಿಕತೆ ಇರುವ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗಜ್ವಾಯಿ ಹಿಂದೂ ಉದ್ದೇಶವೇ ಇಸ್ಲಾಮೀಕರಣ:

ಗಜ್ವಾಯಿ ಹಿಂದೂ ಉದ್ದೇಶವೇ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದಾಗಿದೆ. ಅದರ ಪರಿಣಾಮವಾಗಿಯೇ ನಮ್ಮ ಗಾಂಧರ್ವವನ್ನು ಕತ್ತರಿಸಿ ಅಫ್ಘಾನಿಸ್ತಾನ, ಪಾಕಿಸ್ತಾನ ಮಾಡಿದ್ದು. ಅವರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ನಮ್ಮವರು ಜಾತ್ಯತೀತತೆ ಹೆಸರಿನಲ್ಲಿ ಹಿಂದುಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದರು.

ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಅಂಬೇಡ್ಕರ್ ಅವರ ಥಾಟ್ಸ್ ಆಫ್ ಪಾಕಿಸ್ತಾನ ಪುಸ್ತಕ ಓದಬೇಕು. ಪುಸ್ತಕದ ಪುಟ ಸಂಖ್ಯೆ 123 ರಲ್ಲಿ ಮುಸ್ಲಿಮರನ್ನು ಏಕೆ ಭಾರತದಿಂದ ಶಿಫ್ಟ್ ಮಾಡಬೇಕು. ಪುಟ ಸಂಖ್ಯೆ 125 ರಲ್ಲಿ ಮುಸ್ಲಿಮರು ಭಾರತಕ್ಕೆ ಬೆದರಿಕೆಯಾಗಿ ಉಳಿಯುತ್ತಾರೆ. ಭಾರತದಲ್ಲಿ ಕೋಮುಗಲಭೆ ಸೃಷ್ಟಿಸುತ್ತಲೇ ಇರುತ್ತಾರೆ. ಪುಟ ಸಂಖ್ಯೆ 233 ಹಾಗೂ 234ರಲ್ಲಿ ಮುಸ್ಲಿಮರು ಸಮಾಜ ಹಾಗೂ ವಿಜ್ಞಾನದ ಪ್ರಬಲ ವಿರೋಧಿಗಳು. ಪುಟ ಸಂಖ್ಯೆ 294ರಲ್ಲಿ ಷರಿಯ ಕಾನೂನು ಭಾರತದ ಸಂವಿಧಾನ ಹಾಗೂ ಕಾನೂನಿಗಿಂತ ಮಿಗಿಲು ಎಂದು ಭಾವಿಸುತ್ತಾರೆ. ಪುಟ ಸಂಖ್ಯೆ 297ರಲ್ಲಿ ಭಾರತದಲ್ಲಿ ಅಶಾಂತಿ ನಿರ್ಮಿಸಲು ಕೋಮುಗಲಭೆ ಸೃಷ್ಟಿಸುತ್ತಲೇ ಇರುತ್ತಾರೆ. 303ರಲ್ಲಿ ಭಾರತದಲ್ಲಿ ಹಿಂದೂಗಳ ಸರ್ಕಾರ ವನ್ನು ಮುಸ್ಲಿಮರು ಎಂದಿಗೂ ಒಪ್ಪುವುದಿಲ್ಲ. ಪುಟ ಸಂಖ್ಯೆ 332 ರಲ್ಲಿ ಅಂಬೇಡ್ಕರ್ ಅವರೇ ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿದ್ದಾರೆ. ಆ ಪುಣ್ಯಾತ್ಮ ಅಂದೆ ದೂರದೃಷ್ಟಿಯಿಂದ ಇದೆಲ್ಲವನ್ನು ಅಧ್ಯಯನ ಮಾಡಿದ್ದರು ಎಂದು ಹೇಳಿದರು.

-- ಬಾಕ್ಸ್--

ತಿರುಪತಿ ಲಡ್ಡು ಜೊತೆ ಭಾವನಾತ್ಮಕ ಸಂಬಂಧ:

ತಿರುಪತಿ ಲಡ್ಡು ಪ್ರಸಾದದಲ್ಲಿ ಈ ಹಿಂದಿನ ಸರ್ಕಾರ ಕೊಬ್ಬನ್ನು ಸೇರಿಸಿತ್ತು ಎಂದು ಚಂದ್ರಬಾಬು ನಾಯ್ಡು ಆರೋಪ ಮಾಡಿರುವ ವಿಚಾರದಲ್ಲಿ ಸತ್ಯವಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಿರುಪತಿ ಲಡ್ಡು ಪ್ರಸಾದದ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಈ ಭಾವನಾತ್ಮಕ ಸಂಬಂಧದ ಜೊತೆಗೆ ಯಾರು ಆಟವಾಡಬಾರದು. ನಾವು ಲಡ್ಡುವನ್ನು ಪ್ರಸಾದದ ರೂಪದಲ್ಲಿ ನೋಡುತ್ತೇವೆ. ನಾವೇ ಎಷ್ಟೋ ಬಾರಿ ಪ್ರಸಾದವನ್ನು ಹಂಚಿದ್ದೇವೆ ಎಂದು ಹೇಳಿದರು.

ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ ಎಂದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೆ ನಾವೇ ಲಡ್ಡು ತಯಾರಿಗೆ ಕರ್ನಾಟಕದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದೆವು. ಲಡ್ಡು ತಯಾರಿಕೆ ಹೊಣೆಯನ್ನು ಯಾರಿಗೆ ಕೊಟ್ಟಿದ್ದಾರೆ. ಲಡ್ಡು ತಯಾರಿಕೆ ಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.