ಹುಬ್ಬಳ್ಳಿ:
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಮೊದಲ ಹಂತದ ಸಚಿವ ಸಂಪುಟಕ್ಕೆ ತಮ್ಮ ಹೆಸರು ಸೇರ್ಪಡೆಯಾಗುವ ಬಗ್ಗೆ ಆರಂಭದಲ್ಲಿ ನಿರೀಕ್ಷೆಯಿತ್ತು. ಆದರೆ, ಯಾವ ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಿಲ್ಲ ಎಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ವಿಷಾಧಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ತಾವು ಯಾರನ್ನೂ ಭೇಟಿ ಮಾಡಿಲ್ಲ ಅಥವಾ ಒತ್ತಡ ಹೇರಿಲ್ಲ. ಹೈಕಮಾಂಡ್ ತೆಗೆದುಕೊಂಡ, ತೆಗೆದುಕೊಳ್ಳುವ ನಿರ್ಧಾರವನ್ನು ತಾವು ಗೌರವದಿಂದ ಸ್ವೀಕರಿಸಿದ್ದೇನೆ ಎಂದರು.
ನಿಯಮಾನುಸಾರ ನಡೆಯಲಿ:ಕೆಲವೆಡೆ ದೇವಸ್ಥಾನ, ಮದರಸಾ, ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಒಟ್ಟಿಗೆ ಸೇರಿಸಿ ಎಸ್‌ಐಆರ್ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿವೆ. ಅಂತಹ ಘಟನೆಗಳು ನಡೆದಿದ್ದರೆ ಅವು ನಿಯಮಬಾಹಿರ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸರಿಪಡಿಸುವ ಮೂಲಕ ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಹೇಳಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಂತ ಪವಿತ್ರ ಮತ್ತು ಕಾನೂನುಬದ್ಧ ಪ್ರಕ್ರಿಯೆ. ಚುನಾವಣಾ ಆಯೋಗದ ನಿಯಮಾವಳಿಯಂತೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಅರ್ಜಿ ವಿತರಿಸಿ, ಪರಿಶೀಲಿಸಿ ಸಂಗ್ರಹಿಸಬೇಕು. ಇದೇ ಸರಿಯಾದ ಕ್ರಮ. ಚುನಾವಣಾ ಆಯೋಗ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಗೊಂದಲ ನಿವಾರಿಸಲಿ:
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಅನಗತ್ಯ ದಾಖಲೆ ಕೇಳಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ಜಾತಿ ಪ್ರಮಾಣಪತ್ರ ಅಥವಾ ಪ್ಯಾನ್ ಕಾರ್ಡ್‌ನಂತಹ ದಾಖಲೆ ಕಡ್ಡಾಯವಾಗಿ ಕೇಳುವ ನಿಯಮ ಇಲ್ಲ. ಆಧಾರ್ ಕಾರ್ಡ್ ಮೂಲಕ ಫಲಾನುಭವಿ ರಾಜ್ಯದವರೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಕೆಲವೆಡೆ ಗೊಂದಲ ಉಂಟಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆಯವರು ತಕ್ಷಣ ಸ್ಪಷ್ಟನೆ ನೀಡಿ ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಬೇಕು ಎಂದರು.