ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಳೆದ 18 ವರ್ಷಗಳ ಹಿಂದೆ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಮತ್ತೆ ನಾನೇ ಅಧಿಕಾರಕ್ಕೆ ಬಂದು ಶಂಕುಸ್ಥಾಪನೆ ಮಾಡುವಂತಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಕಂಬದಹಳ್ಳಿಯಲ್ಲಿ 22 ಕೋಟಿ ರು. ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾಡಿನ ಅಭಿವೃದ್ಧಿ ಜೊತೆಗೆ ರೈತರು, ಜನಸಾಮಾನ್ಯರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳ ಅನುಕೂಲಕ್ಕಾಗಿ ಮಂಜೂರಾಗಿದ್ದ ವಸತಿ ಶಾಲೆಗೆ ಕಟ್ಟಡ ನಿರ್ಮಿಸಲು ಆಗದೆ 10 ವರ್ಷ ಕಾಲ ಶಾಸಕರಾಗಿದ್ದವರು. ಯಾವ ಅಭಿವೃದ್ಧಿ ಮಾಡಿದ್ದಾರೆಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಕುಟುಕಿದರು.ತಾಲೂಕಿನ ಬಹುತೇಕ ಕೆರೆಗಳಿಗೆ ಹೇಮಾವತಿ ಜಲಾಶಯದ ನೀರು ತುಂಬಿಸಬೇಕೆಂಬ ಉದ್ದೇಶದಿಂದ ಕಳೆದ 2017ರಲ್ಲಿ 213 ಕೋಟಿ ರು. ವೆಚ್ಚದ ಏತನೀರಾವರಿ ಯೋಜನೆ ಮಂಜೂರು ಮಾಡಿಸಿದ್ದೆ. 2018ರ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ. ಈ ಅವಧಿಯಲ್ಲಿ ಚಲುವರಾಯಸ್ವಾಮಿ ಗೆದ್ದು ಶಾಸಕರಾದರೆ ಯೋಜನೆ ನಿಂತು ಹೋಗುತ್ತೆ. ಚಲುವರಾಯಸ್ವಾಮಿಯನ್ನು ಸೋಲಿಸಿದರೆ ಎಲ್ಲಾ ಕೆರೆಗಳು ತುಂಬಿಹೋಗುತ್ತವೆಂದು ನನ್ನನ್ನು 47 ಸಾವಿರ ಮತಗಳಿಂದ ಸೋಲಿಸಿ ತಾಲೂಕಿನ ಜನ ಬಹಳ ಖುಷಿಪಟ್ಟರು ಎಂದರು.
ನಂತರ 5 ವರ್ಷ ಕಾಲ ತಾಲೂಕಿನ ಜೆಡಿಎಸ್ ಶಾಸಕರಾಗಲಿ, ಮುಖ್ಯಮಂತ್ರಿಗಳಾಗಿದ್ದ ಎಚ್ಡಿ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಾಗಲಿ ಮಂಜೂರಾಗಿದ್ದ ಯೋಜನೆಗೆ ಚಾಲನೆ ಕೊಟ್ಟು ಕೆರೆ ತುಂಬಿಸುವ ಪ್ರಯತ್ನ ಮಾಡಲಿಲ್ಲ ಎಂದು ಟೀಕಿಸಿದರು.2023ರಲ್ಲಿ ಮತ್ತೆ ನಾನು ಶಾಸಕ, ಸಚಿವನಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದಿನ ಯೋಜನೆಗೆ ಮತ್ತಷ್ಟು ಕೆರೆಗಳನ್ನು ಸೇರ್ಪಡೆ ಮಾಡಿ 130ಕೋಟಿ ರು. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ 342 ಕೋಟಿ ರು. ವೆಚ್ಚದ ಏತನೀರಾವರಿ ಯೋಜನೆಗೆ ಗಿಡುವಿನಹೊಸಹಳ್ಳಿ ಸಮೀಪ ಇತ್ತೀಚೆಗೆ ಚಾಲನೆ ನೀಡಿದ್ದೇನೆ ಎಂದರು.
ತಾಲೂಕಿನ ಜನರ ನಿರೀಕ್ಷೆಗೂ ಮೀರಿ ನಾನು ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ ಸಹ ಜನರು ಇದ್ಯಾವುದನ್ನು ಪರಿಗಣಿಸಿದೆ ಚುನಾವಣೆ ಸಂದರ್ಭದಲ್ಲಿ ಆಲೋಚನೆ ಮಾಡುವುದನ್ನು ನೋಡಿದರೆ ನನ್ನ ದುರಾದೃಷ್ಟ ಅಲ್ಲವೆ ಎಂದು ಬೇಸರ ವ್ಯಕ್ತಪಡಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳ, ತಾಪಂ ಇಒ ಬಿ.ಎಸ್.ಸತೀಶ್, ಗ್ರಾಪಂ ಅಧ್ಯಕ್ಷೆ ಬಿ.ಟಿ.ಪವಿತ್ರ, ಉಪಾಧ್ಯಕ್ಷೆ ಶ್ವೇತ, ಬಿಂಡಿಗನವಿಲೆ ಪಿಎಸಿಎಸ್ ಅಧ್ಯಕ್ಷ ನೂತನ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಮುಖಂಡರಾದ ಸುನಿಲ್ ಲಕ್ಷ್ಮಿಕಾಂತ್, ಶರತ್ ರಾಮಣ್ಣ, ಗೃಹ ನಿರ್ಮಾಣ ಮಂಡಳಿ ಎಇಇ ರಾಜೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ದಾಸಪ್ಪ ಬೋವಿ, ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್‌ಕುಮಾರ್ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))