ಕನ್ನಡಪ್ರಭ ವಾರ್ತೆ ತುಮಕೂರು ಇಂದಿನ ವಿಜ್ಞಾನ, ತಂತ್ರಜ್ಞಾನ ಕಾಲದಲ್ಲಿ ಮಕ್ಕಳು, ಯುವಜನರಲ್ಲಿ ನಮ್ಮ ಹಿಂದೂ ಸಂಸ್ಕೃತಿ. ಸಂಪ್ರದಾಯಗಳನ್ನು ತಿಳಿಸಬೇಕು. ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಪರಿಚಯಿಸಬೇಕು. ಇತಿಹಾಸದ ಮಹತ್ವ ತಿಳಿಯದಿದ್ದರೆ ಆ ದೇಶದ ಧರ್ಮ, ಸಂಸ್ಕೃತಿ ನಾಶವಾಗುವ ಅಪಾಯವಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ನಗರದ ಬನಶಂಕರಿ, ಶಾಂತಿನಗರ, ಅಮರಜ್ಯೋತಿನಗರ, ಸದಾಶಿವನಗರ, ವೀರಸಾಗರ, ಕುರಿಪಾಳ್ಯ, ಸರಸ್ವತಿಪುರಂ, ಮರಳೂರು, ಮರಳೂರು ದಿಣ್ಣೆ ವಸತಿಗಳ ಹಿಂದು ಸಮಾಜೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ವೈಭವದ ಶೋಭಾಯಾತ್ರೆ ನಂತರ ಅಮರಜ್ಯೋತಿನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆದ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.ಯಾವುದೇ ದೇಶ, ಅಲ್ಲಿನ ಧರ್ಮ, ಸಂಸ್ಕೃತಿ, ಪರಂಪರೆ ನಾಶವಾಗಲು ಪ್ರಮುಖವಾಗಿ ಅಲ್ಲಿನ ಇತಿಹಾಸ ಮರೆಯುವುದು, ದೇಶಾಭಿಮಾನ ಇಲ್ಲದಿರುವುದು ಹಾಗೂ ಒಗ್ಗಟ್ಟಾಗದಿರುವುದು ಎಂದು ದಾರ್ಶನಿಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಏನೋ ನಮ್ಮ ಧರ್ಮ, ಪರಂಪರೆಯನ್ನು ಹಿಂದೂಗಳಲ್ಲಿ ಜಾಗೃತಿಗೊಳಿಸಲು ದೇಶಾದ್ಯಂತ ಹಿಂದೂ ಸಮಾಜೋತ್ಸವ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದರು. ಹಿಂದೂಗಳು ಒಗ್ಗಟ್ಟಾಗದಿದ್ದರೆ, ನಮ್ಮ ಇತಿಹಾಸ, ಧರ್ಮ, ಪರಂಪರೆಯನ್ನು ಮರೆತರೆ, ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಅನುಸರಿಸದಿದ್ದರೆ ಅಳಿವು ಉಂಟಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಅನಿವಾರ್ಯವಾಗಿ ಈ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವ ಸಹಕಾರಿಯಾಗಲಿದೆ ಎಂದು ಹೇಳಿದರು.ಮುಖ್ಯ ಭಾಷಣಾಕಾರರಾಗಿ ಆಗಮಿಸಿದ್ದ ದೇವಸ್ಥಾನಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ ಮಾತನಾಡಿ, ಹಿಂದೂ ಸಮಾಜೋತ್ಸವ ಯಾರ ವಿರುದ್ಧವೂ ಅಲ್ಲ, ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ್ದು ಅದರ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂಬುದೂ ಅಲ್ಲ, ಆದರ ನೆಪದದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ದೇಶದ ಹೊಣೆಗಾರಿಕೆಯನ್ನು ನಮ್ಮವರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು. ಆದರೆ, ಕಪ್ಪು ಕನ್ನಡ ಧರಿಸಿ ಜಗತ್ತು ಕಪ್ಪಾಗಿದೆ ಎನ್ನುವವರು, ವಿಚಾರವಾದಿಗಳು ಎಂಬ ವಿಕಾರವಾದಿಗಳು ಹಿಂದೂ ಸಮಾಜೋತ್ಸವ ಆಚರಣೆಯು ಮುಸ್ಲಿಂ, ಕ್ರಿಶ್ಚಿಯನ್ ವಿರುದ್ಧ ಸಂಘರ್ಷಕ್ಕಾಗಿ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಯಾರ ವಿರುದ್ಧವೂ ಅಲ್ಲ, ನಮ್ಮನ್ನು ನಾವು ಜಾಗೃತಿಗೊಳಿಸಿಕೊಳ್ಳಲು, ನಮ್ಮ ಸಂಸ್ಕೃತಿ, ಸಂಪ್ರದಾಯ, ಧರ್ಮವನ್ನು ಸಂಭ್ರಮಿಸಲು ಹಿಂದೂ ಸಮಾಜೋತ್ಸವ ಆಚರಿಸುತ್ತಿದ್ದೇವೆ ಎಂದು ಹೇಳಿದರು.ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಕೆಂಬಾಳ್ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ಲೇಖಕಿ ವಿದ್ಯಾ ಅರಮನೆ, ಮರಳೂರು ಮಾಜಿ ಚೇರ್ಮನ್ ಭೀಮಯ್ಯ, ಮುಖಂಡರಾದ ಡಿ.ಆರ್.ನರಸಿಂಹಮೂರ್ತಿ, ಕೆ.ಎಸ್.ದಿವಾಕರ್, ಲಲಿತಮ್ಮ ನಾಗರಾಜು, ಟಿ.ಕೆ.ಕುಮಾರ್ ನಾಯ್ಡು, ಗುರುಸಿದ್ಧಪ್ಪ ಮೊದಲಾದವರು ಭಾಗವಹಿಸಿದ್ದರು. ಈ ವೇಳೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಶೋಭಾಯಾತ್ರೆಯಲ್ಲಿ ಈ ಪ್ರದೇಶದ ವಿವಿಧ ದೇವಸ್ಥಾನಗಳ ಮೆರವಣಿಗೆ ದೇವರುಗಳನ್ನು ಕರೆತರಲಾಗಿತ್ತು. ಭಾರತಮಾತೆ ಭಾವಚಿತ್ರ, ಮಂಗಳವಾದ್ಯ, ಪೂರ್ಣಕುಂಭ, ವಿವಿಧ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಶೋಭಾಯಾತ್ರೆಯ ವೈಭವ ಹೆಚ್ಚಿಸಿದವು. ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಶಿರಡಿ ಸಾಯಿಬಾಬಾ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗುರುಸಿದ್ಧಪ್ಪ, ಹಿಂದೂ ಸಮಾಜೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಸಿ.ಶಿವಕುಮಾರ್, ಖಜಾಂಚಿ ಕೆ.ವೇದಮೂರ್ತಿ, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಬೆಳ್ಳಿ ಲೋಕೇಶ್, ಧರಣೇಂದ್ರಕುಮಾರ್, ಕೃಷ್ಣಮೂರ್ತಿ, ಬಂಬೂ ಮೋಹನ್, ಕುಮಟೇಶ್, ಕಡ್ಡಿ ಕುಮಾರ್, ನಿಸರ್ಗ ರಮೇಶ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.