ನನ್ನ ಮೇಲೆ ಹಲ್ಲೆ ನಡೆದರೂ ಯಾರನ್ನೂ ಬಂಧಿಸಲಿಲ್ಲ: ಸುಮಲತಾ

| Published : Aug 02 2025, 12:00 AM IST

ನನ್ನ ಮೇಲೆ ಹಲ್ಲೆ ನಡೆದರೂ ಯಾರನ್ನೂ ಬಂಧಿಸಲಿಲ್ಲ: ಸುಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ದರ್ಶನ್ ಈ ವಿಚಾರದಲ್ಲಿ ಮೌನ ವಹಿಸಿರುವ ಬಗ್ಗೆ ಕೇಳಿದಾಗ, ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಸಾಮಾಜಿಕ ಜಾಲತಾಣದಲ್ಲಾದರೂ ಮಾತನಾಡಬಹುದಿತ್ತು ಎಂದಾಗ ಇದನ್ನೂ ಅವರನ್ನೇ ಕೇಳಬೇಕು. ನಾನು ದರ್ಶನ್ ಪರವಾಗಿ ಹೇಳಿದರೆ ತಪ್ಪಾಗುತ್ತದೆ. ನಾನು ಯಾವ ನಟನ ಅಭಿಮಾನಿಗೂ ವಿಶೇಷವಾಗಿ ಹೇಳೋಲ್ಲ.

ರಮ್ಯಾ ಮಾತ್ರವಲ್ಲ, ಆರೇಳು ವರ್ಷ ನಾನೂ ಸಾಕಷ್ಟು ಎದುರಿಸಿದ್ದೇನೆ । ತನಿಖೆ ಮುಗಿದು ವರದಿ ಕೊಡಲಿ, ನಾವೇ ತೀರ್ಪು ಕೊಡುವುದು ಬೇಡ

ಕನ್ನಡಪ್ರಭ ವಾರ್ತೆ ಮಂಡ್ಯ

ರಮ್ಯಾ ಮಾತ್ರವಲ್ಲ, ನಾನು ಸಂಸದೆಯಾಗಿದ್ದ ವೇಳೆ ಆರೇಳು ವರ್ಷ ಸಾಕಷ್ಟು ಟೀಕೆ- ಆರೋಪ, ಕಮೆಂಟ್‌ಗಳನ್ನು ಎದುರಿಸಿದ್ದೇನೆ. ಒಮ್ಮೆ ಕೆ.ಆರ್.ನಗರದಲ್ಲಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆದಿತ್ತು. ಆ ಬಗ್ಗೆ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದೆ. ಇದುವರೆಗೂ ಯಾರೊಬ್ಬರನ್ನೂ ಪೊಲೀಸರು ಬಂಧಿಸಿಲ್ಲ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ರಮ್ಯಾ ಅಂತಲ್ಲ, ಹೆಣ್ಣುಮಕ್ಕಳ ವಿಷಯದಲ್ಲಿ ಯಾರೊಬ್ಬರ ವಿರುದ್ಧವೂ ಅಗೌರವವಾಗಿ ಕಮೆಂಟ್ ಮಾಡಬಾರದು. ತಮ್ಮ ವಿರುದ್ಧ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಆಗಲಿ. ಸಾಮಾನ್ಯ ಜನರಿಗೂ ಇಂತಹ ಟೀಕೆಗಳು ವ್ಯಕ್ತವಾದಾಗ ಸರ್ಕಾರದ ಸ್ಪಂದನೆ ಹೀಗೇ ಇದ್ದರೆ ಸಂತೋಷ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಸಾಮಾಜಿಕ ಜಾಲತಾಣವನ್ನು ಯಾವುದಕ್ಕೆ ,ಎಲ್ಲಿ ಬಳಸಬೇಕು ಎಂಬುದನ್ನು ಯುವಕರು ಯೋಚಿಸಬೇಕು. ಯಾರನ್ನೋ ಟಾರ್ಗೆಟ್ ಮಾಡುವುದಕ್ಕೇ ಹೆಚ್ಚು ಬಳಕೆಯಾಗುತ್ತಿದೆ. ಅನಾಮಿಕರ ಹೆಸರಿನಲ್ಲಿ ಪೋಸ್ಟ್ ಮಾಡಿ ಸಿಕ್ಕಿಹಾಕಿಕೊಳ್ಳುವುದಿಲ್ಲವೆಂದು ತಿಳಿದುಕೊಂಡಿದ್ದರೆ ಅದು ತಪ್ಪು. ಈಗಿನ ತಂತ್ರಜ್ಞಾನದಲ್ಲಿ ಯಾರೇ ಪೋಸ್ಟ್ ಮಾಡಿದ್ದರೂ ಕಂಡುಹಿಡಿಯಬಹುದು. ಹಾಗಾಗಿ ಸಾಮಾಜಿಕ ಜಾಲತಾಣವನ್ನು ಒಬ್ಬರನ್ನು ಟಾರ್ಗೆಟ್ ಮಾಡುವುದಕ್ಕೆ ಬಳಸಬಾರದು. ಇದರಿಂದ ನಿಮ್ಮ ಜೀವನ ಹಾಳಾಗಲಿದೆ ಎಂದು ಎಚ್ಚರಿಕೆ ನೀಡಿದರು.

ದರ್ಶನ್ ಈ ವಿಚಾರದಲ್ಲಿ ಮೌನ ವಹಿಸಿರುವ ಬಗ್ಗೆ ಕೇಳಿದಾಗ, ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಸಾಮಾಜಿಕ ಜಾಲತಾಣದಲ್ಲಾದರೂ ಮಾತನಾಡಬಹುದಿತ್ತು ಎಂದಾಗ ಇದನ್ನೂ ಅವರನ್ನೇ ಕೇಳಬೇಕು. ನಾನು ದರ್ಶನ್ ಪರವಾಗಿ ಹೇಳಿದರೆ ತಪ್ಪಾಗುತ್ತದೆ. ನಾನು ಯಾವ ನಟನ ಅಭಿಮಾನಿಗೂ ವಿಶೇಷವಾಗಿ ಹೇಳೋಲ್ಲ. ಎಲ್ಲರಿಗೂ ಹೇಳುತ್ತೇನೆ. ಇನ್ನು ದರ್ಶನ್ ಅಭಿಮಾನಿಗಳೇ ಮಾಡಿದ್ದಾರೆ ಎನ್ನುವುದಕ್ಕೆ ಆಧಾರ ಇಲ್ಲ. ಒಮ್ಮೆ ಅವರೇ ಮಾಡಿದ್ದರೆ ಯಾರೂ ಆ ರೀತಿ ಮಾಡಬಾರದು. ನಿಮ್ಮ ಕುಟುಂಬ, ಭವಿಷ್ಯದ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡುತ್ತೇನೆ ಎಂದಷ್ಟೇ ಹೇಳಿದರು.

ಇನ್ನು ಧರ್ಮಸ್ಥಳ ಪ್ರಕರಣದ ವಿಚಾರದಲ್ಲಿ ಆರೋಪ ಮಾಡುವುದು ಸುಲಭ. ಅದನ್ನು ಸಾಬೀತು ಮಾಡುವುದು ಕಷ್ಟವಿದೆ. ಯಾರೋ ಹೇಳಿದಾಕ್ಷಣ ಅದು ನಿಜ ಆಗಬೇಕೆಂದೇನಿಲ್ಲ. ಎಸ್‌ಐಟಿ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳು ವರದಿ ಕೊಡಲಿ. ಸತ್ಯ ಏನಿದೆಯೋ ಅದು ಹೊರಗೆಬರಲಿ. ಅದಕ್ಕೆ ಮೊದಲೇ ನಾವು ತೀರ್ಪು ಕೊಡಬಾರದು ಎಂದರು.

ಮುಖಂಡ ಬೇಲೂರು ಸೋಮಶೇಖರ್ ಸೇರಿದಂತೆ ಇತರರಿದ್ದರು.