ಆರೋಪ ಮಾಡುವವರ ವಿರುದ್ಧವೂ ತನಿಖೆಯಾಗಲಿ: ಡಾ.ಅಶ್ವತ್ಥನಾರಾಯಣ

| Published : Aug 02 2025, 12:00 AM IST

ಆರೋಪ ಮಾಡುವವರ ವಿರುದ್ಧವೂ ತನಿಖೆಯಾಗಲಿ: ಡಾ.ಅಶ್ವತ್ಥನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಈ ರೀತಿಯಾಗಿ ಆರೋಪ ಮಾಡುವವರ ವಿರುದ್ಧವೂ ತನಿಖೆಯಾಗಬೇಕು. ಆಗ ಆರೋಪ ಮಾಡುವವರ ಹಿಂದೆ ಯಾರಿದ್ದಾರೆ, ಯಾರು ಅವರಿಗೆ ಹಣ ಕೊಡುತ್ತಿದ್ದಾರೆ. ಆರೋಪದ ಹಿಂದಿನ ಸಂಚೇನು ಎನ್ನುವುದೂ ತನಿಖೆಯಿಂದ ಬಹಿರಂಗವಾಗಬೇಕು.

ಅವರ ಹಿಂದೆ ಯಾರಿದ್ದಾರೆ, ಯಾರು ಹಣ ಕೊಡುತ್ತಿದ್ದಾರೆ ಬಹಿರಂಗವಾಗಲಿ । ತನಿಖೆ ತ್ವರಿತಗತಿಯಲ್ಲಿ ಮುಗಿಯಲಿ; ವರ್ಷಾನುಗಟ್ಟಲೆ ಎಳೆಯೋದು ಬೇಡ

ಕನ್ನಡಪ್ರಭ ವಾರ್ತೆ ಮಂಡ್ಯ

ಧರ್ಮಸ್ಥಳದ ವಿಚಾರದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅಗ್ನಿಪರೀಕ್ಷೆ ಎದುರಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಅದೇ ರೀತಿ ಆರೋಪ ಮಾಡುವವರ ವಿರುದ್ಧವೂ ಸರ್ಕಾರ ತನಿಖೆ ನಡೆಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಪಡಿಸಿದರು.

ನಮ್ಮ ನಂಬಿಕೆಯ ಕೇಂದ್ರದ ಮೇಲೆ ಪಿಎಫ್‌ಐ, ಎಸ್‌ಎಫ್‌ಐಗಳು ಮಾತನಾಡಲಾರಂಭಿಸಿವೆ. ಯೂ- ಟ್ಯೂಬರ್‌ವೊಬ್ಬ ಎಲ್ಲೋ ಕುಳಿತು ಮಾತನಾಡುತ್ತಾನೆ. ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ತೀರ್ಪನ್ನೇ ಕೊಟ್ಟುಬಿಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಪುಣ್ಯಕ್ಷೇತ್ರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಈ ರೀತಿಯಾಗಿ ಆರೋಪ ಮಾಡುವವರ ವಿರುದ್ಧವೂ ತನಿಖೆಯಾಗಬೇಕು. ಆಗ ಆರೋಪ ಮಾಡುವವರ ಹಿಂದೆ ಯಾರಿದ್ದಾರೆ, ಯಾರು ಅವರಿಗೆ ಹಣ ಕೊಡುತ್ತಿದ್ದಾರೆ. ಆರೋಪದ ಹಿಂದಿನ ಸಂಚೇನು ಎನ್ನುವುದೂ ತನಿಖೆಯಿಂದ ಬಹಿರಂಗವಾಗಬೇಕು. ಧರ್ಮಸ್ಥಳದ ಮೇಲೆ ಬಂದಿರುವ ಆರೋಪ ಎದುರಿಸುವುದಕ್ಕೆ ಧರ್ಮಾಧಿಕಾರಿಗಳು ಸಿದ್ಧರಾಗಿದ್ದಾರೆ. ಸರ್ಕಾರ ಎಸ್‌ಐಟಿ ಮೂಲಕ ನಡೆಸುತ್ತಿರುವ ತನಿಖೆ ಆದಷ್ಟು ಶೀಘ್ರ ಮುಗಿಸಲಿ. ಸತ್ಯ ಹೊರಬರಲಿ. ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿ. ಪುಣ್ಯಕ್ಷೇತ್ರದ ಮೇಲಿನ ಅಪನಂಬಿಕೆ, ಕಳಂಕ ದೂರವಾಗಲಿ. ತನಿಖೆ ಹೆಸರಿನಲ್ಲಿ ವರ್ಷಾನುಗಟ್ಟಲೇ ಎಳೆಯುವುದು ಬೇಡ. ಮೂರು ತಿಂಗಳೊಳಗೆ ತನಿಖೆ ಮುಗಿಸಿ ವರದಿ ನೀಡಲು ಸಾಧ್ಯವಿದೆ. ಆ ಕೆಲಸವನ್ನು ತನಿಖಾಧಿಕಾರಿಗಳು ಬೇಗ ಮುಗಿಸಲಿ ಎಂದು ಒತ್ತಾಯಿಸಿದರು.

ಸದನದಲ್ಲಿ ಏಕೆ ಮಾತನಾಡಲಿಲ್ಲ?:

ಲೋಕಸಭೆ ಚುನಾವಣೆಯ ಮತಪಟ್ಟಿ ನಕಲು, ಗೊಂದಲವಿದ್ದು, ಅದಕ್ಕೆ ಸಾಕ್ಷಿ ರಾಹುಲ್‌ಗಾಂಧಿ ಬಳಿ ಇರುವುದಾಗಿ ಕಾಂಗ್ರೆಸ್‌ನವರು ಹೊರಗಡೆ ಹೇಳುವ ಬದಲು ಸದನದ ಒಳಗೆ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಬಹುದಿತ್ತಲ್ಲವೇ. ಸದನದಲ್ಲಿ ಈ ವಿಚಾರ ಪ್ರಸ್ತಾಪಿಸದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗಕ್ಕೆ ಮಸಿ ಬಳಿಯಲು ಹಾಗೂ ಸಂವಿಧಾನಕ್ಕೆ ಅಗೌರವವನ್ನು ಉಂಟುಮಾಡಲು ಈ ರೀತಿಯ ನಾಟಕವಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಅವರಡಿಯಲ್ಲೇ ಅಧಿಕಾರಿಗಳಿದ್ದರು. ರಿಟರ್ನಿಂಗ್ ಆಫೀಸರ್‌ಗಳೂ ಅವರ ಸರ್ಕಾರದವರೇ ಇದ್ದರು. ಮತದಾರರ ಪಟ್ಟಿ ದೋಷಪೂರಿತವಾಗಿದ್ದರೆ ಅದಕ್ಕೆ ಸರ್ಕಾರವೇ ಹೊಣೆಯಲ್ಲವೇ. ಇದರ ಸಾಕ್ಷಿಗಳು ರಾಹುಲ್‌ಗಾಂಧಿ ಬಳಿ ಇವೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿ ಸಾಕ್ಷಿ ಇಲ್ಲವೇ. ಇದೆಲ್ಲವೂ ರಾಹುಲ್‌ಗಾಂಧಿ ಮತ್ತು ಸಿದ್ದರಾಮಯ್ಯನವರ ಕೀಳುಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿವೆ ಎಂದು ಜರಿದರು.

ರಾಹುಲ್‌ಗಾಂಧಿಗೆ ಅಷ್ಟೊಂದು ಕಾಳಜಿ ಇದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಸತ್ತವರ ಕುಟುಂಬದವರ ಮನೆಗೆ ಏಕೆ ಹೋಗಲಿಲ್ಲ, ಸಾಂತ್ವನ ಏಕೆ ಹೇಳಲಿಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಏಕೆ ಮಾತನಾಡುತ್ತಿಲ್ಲ. ಇಂತಹ ಆರೋಪಗಳನ್ನು ಮಾಡುವುದು ಬಿಟ್ಟು ರಾಜ್ಯದ ಜನರು ಒಂದು ಅವಕಾಶ ಕೊಟ್ಟಿದ್ದಾರೆ. ಸರ್ವಾಧಿಕಾರಿಗಳಂತೆ ಆಡಳಿತ ನಡೆಸದೆ ಒಳ್ಳೆಯ ಆಡಳಿತ ಕೊಡಿ ಎಂದು ಸಲಹೆ ನೀಡಿದರು.

ನಾವು ಯಾರಿಗೂ ಮಸಿ ಬಳಿಯೋಲ್ಲ:

ಪಕ್ಷಕ್ಕೆ ಬರುವವರಿಗೆ ನಾವು ಯಾರೂ ತಡೆಗೋಡೆ ಹಾಕಲಾಗುವುದಿಲ್ಲ. ಹೈಕಮಾಂಡ್ ಇದೆ. ತೀರ್ಮಾನ ಮಾಡುತ್ತೆ. ಎಲ್ಲರೂ ಅವರವರ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅವರಿಗೆ ಮಸಿ ಬಳಿಯುವ ಕೆಲಸ ಮಾಡಬಾರದು. ಯಾವಾಗ ಅವರಿಗೆ ಯಾವ ಪಕ್ಷ ಸೇರಬೇಕೆನ್ನಿಸುವುದೋ ಆಗ ಅವರು ಆಯ್ಕೆ ಮಾಡಿಕೊಳ್ಳುವುದಕ್ಕೆ ಸ್ವತಂತ್ರರಿರುತ್ತಾರೆ. ಸುಮ್ಮನೆ ನಾವು ಇವರು ಬರ್ತಾರೆ, ಅವರು ಬರ್ತಾರೆ ಅಂತ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವುದಿಲ್ಲ. ಈಗ ಆ ವಿಚಾರ ಮಾತನಾಡುವುದು ಉಚಿತವೂ ಅಲ್ಲ ಎಂದರು.

ಸರ್ಕಾರದಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ. ಅವರ ಕಚ್ಚಾಟ- ಗುದ್ದಾಟ ಎಲ್ಲಿಗೆ ತಲುಪಲಿದೆಯೋ ಕಾದುನೋಡೋಣ. ಜನರೂ ಅದನ್ನು ನೋಡುತ್ತಿದ್ದಾರೆ. ಸರ್ಕಾರವನ್ನು ಏನು ಮಾಡುತ್ತಾರೆ ಎಂಬುದನ್ನು ನೋಡೋಣ. ಅದಕ್ಕೆ ಅವರೇ ದಾರಿ ತೋರಿಸುತ್ತಾರೆ ಎಂದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ, ಎಚ್.ಆರ್.ಅರವಿಂದ್, ಡಾ.ಸದಾನಂದ, ಸಂಜಯ್ ಸೇರಿದಂತೆ ಇತರರಿದ್ದರು.

೧ಕೆಎಂಎನ್‌ಡಿ-೬

ಮಂಡ್ಯಕ್ಕೆ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಬಿಜೆಪಿ ಮುಖಂಡರಾದ ಎಸ್.ಸಚ್ಚಿದಾನಂದ, ಎಚ್.ಆರ್.ಅರವಿಂದ್, ಡಾ.ಸದಾನಂದ ಅಭಿನಂದಿಸಿದರು.