ಸಾರಾಂಶ
ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಅವಕಾಶ ವಂಚಿತ ಕ್ಷೇತ್ರ ಯಾವುದಾದರೂ ಇದ್ದರೆ ಅದು ಇಂಡಿ ಮತಕ್ಷೇತ್ರ. ಸ್ವತಂತ್ರ್ಯದ ನಂತರ ಇಲ್ಲಿಯವರೆಗೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.
ವಿಜಯಪುರ : ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಅವಕಾಶ ವಂಚಿತ ಕ್ಷೇತ್ರ ಯಾವುದಾದರೂ ಇದ್ದರೆ ಅದು ಇಂಡಿ ಮತಕ್ಷೇತ್ರ. ಸ್ವತಂತ್ರ್ಯದ ನಂತರ ಇಲ್ಲಿಯವರೆಗೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನವೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದೆಂಬ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, 2023ರ ಚುನಾವಣೆ ಪೂರ್ವದಲ್ಲಿ ನಮಗೆ ಮೂವರಿಗೆ ಕರೆದು ಮಾತು ಕೊಟ್ಟಿದ್ದರು. ಯಾರು ಮಾತು ಕೊಟ್ಟಿದ್ದಾರೆ ಅವರು ಉಳಿಸಿಕೊಳ್ಳುತ್ತಾರಾ ಅಂತಾ ನಾನು ನೋಡುತ್ತಿರುವೆ. ಈ ಬಾರಿ ನಮ್ಮ ಭಾಗದ ಜನ ಕೂಡ ಸಚಿವ ಸ್ಥಾನದ ಬೇಡಿಕೆ ಇಡುತ್ತಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿಗಳು ಇಂಡಿ ನಗರಕ್ಕೆ ಬಂದಾಗ ಜನರು ದಾಂಧಲೆ ಎಬ್ಬಿಸಬೇಕು ಎಂದುಕೊಂಡಿದ್ದರು. ಆಗ ನಮ್ಮ ಮತಕ್ಷೇತ್ರದ ಜನರಿಗೆ ತಿಳಿಹೇಳಿ ಯಾರಾದರೂ ಗದ್ದಲ ಮಾಡಿದರೆ ನಾನು ರಾಜಕಾರಣದಲ್ಲಿ ಇರಲ್ಲ ಎಂದು ಹೇಳಿದ್ದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಾನು 24 ಕ್ಯಾರೆಟ್ ಗೋಲ್ಡ್
ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ನಾನು 24 ಕ್ಯಾರೆಟ್ ಗೋಲ್ಡ್. 22 ಕ್ಯಾರೇಟ್ ಅಲ್ಲ, ಅವರು ಅಧಿಕಾರ ಕೊಟ್ಟರೂ ಅಷ್ಟೇ ಕೊಡದಿದ್ದರೂ ಅಷ್ಟೇ. ನಾನು ಆಮದು ವಸ್ತು ಕೂಡ ಅಲ್ಲ, ಅಧಿಕಾರ ಕೊಟ್ಟರು ಕೊಡದಿದ್ದರೂ ಇಲ್ಲೇ ಇರುವೆ. ಅಧಿಕಾರದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ, ಆದರೆ ಸಾಯುವವರೆಗೂ ಕಾಂಗ್ರೆಸ್‌ಗೆ ಮತ ಹಾಕಿ ಸಾಯುವೆ. ನಾಲ್ಕು ಜಿಪಂ ಹಾಗೂ ನಾಲ್ಕು ಶಾಸಕ ಅವಧಿಗೆ ಕೆಲಸ ಮಾಡಿರುವೆ. ಇನ್ನು ಎರಡೂವರೆ ವರ್ಷವಾದರೆ 40 ವರ್ಷ ರಾಜಕಾರಣದಲ್ಲಿ ಇದ್ದ ಹಾಗೆ ಆಗುತ್ತದೆ. ವಿಶೇಷವಾಗಿ ಮೋಸ್ಟ್ ಕ್ರಿಮಿನಲ್, ಮೊಸ್ಟ್ ಅನ್ ಹೆಲ್ದಿ ಕ್ಷೇತ್ರದಲ್ಲಿ ನಾನು ಬದ್ಧತೆಯಿಂದ ರಾಜಕಾರಣ ಮಾಡುತ್ತಿರುವೆ. ಈ ನಿರ್ಣಯದಲ್ಲಿ ಇವರು ಲೋಪ ಮಾಡಿದರೆ ನಾನು ಹೇಳುವುದಿಲ್ಲ ಮಾಡಿ ತೋರಿಸುವೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು
ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿ ಪರಿಷ್ಕರಣೆ ಮಾಡಬೇಕು, ಇಲ್ಲವಾದರೆ ಸ್ಪಿನ್ನಿಂಗ್ ಮಿಲ್ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಹಿತ ಎರಡು ಮುಖ್ಯ. ಆದರೆ, ಕೇಂದ್ರ ಸರ್ಕಾರದ ನೀತಿಗಳಿಂದ ಸಹಕಾರ ವಲಯದ ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಬಂದು ಒಂದು ತಿಂಗಳಾಯಿತು, ಅತಿವೃಷ್ಟಿಯಿಂದಾಗಿ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಾನಿಗೀಡಾಗಿರುವ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನೀಡಿದ್ದ ಮಾತು ಇನ್ನು ಈಡೇರಿಲ್ಲ. ರೈತರ ವಿಷಯಕ್ಕೆ ಮೊದಲು ಸ್ಪಂದನೆ ಇರಲಿ, ನೀಡಿದ್ದ ಮಾತಿನಂತೆ ರೈತರಿಗೆ ಪರಿಹಾರ ಒದಗಿಸಿ ಎಂದು ಮನವಿ ಮಾಡಿದರು.
;Resize=(128,128))
;Resize=(128,128))
;Resize=(128,128))