ಸಾರಾಂಶ
ಎಚ್‌ಡಿಆರ್ ಸವಾಲು ಸ್ವೀಕಾರ ಮಾಡುತ್ತೇನೆ ಎಂದ ಬಿಜೆಪಿಯ ಜಿ. ದೇವರಾಜೇಗೌಡ । ರಿಯಲ್ ಎಸ್ಟೇಟ್‌ನಿಂದಲೂ ದುಡಿಮೆ । ಬೇನಾಮಿ ಆಸ್ತಿಯಿಲ್ಲಕನ್ನಡಪ್ರಭ ವಾರ್ತೆ ಹಾಸನ
ಎಂಪಿ ಚುನಾವಣೆಯ ವಿಚಾರವಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣನವರು ನನ್ನ ವಿರುದ್ಧ ಪೊಳ್ಳು ಎಂಬ ಅಸಂಬದ್ಧ ಪದ ಬಳಕೆ ಮಾಡಲಾಗಿದೆ. ನನ್ನ ವಿರುದ್ಧ ಹಾಕಲಾಗಿರುವ ಸವಾಲನ್ನು ಸ್ವೀಕಾರ ಮಾಡಲಾಗುವುದು. ರೇವಣ್ಣ ಅವರು ಸೂಕ್ತ ವಿಳಾಸ ನೀಡಿದರೆ ಸೂಕ್ತ ದಾಖಲೆಗಳನ್ನು ಕೊರಿಯರ್ ಮಾಡುತ್ತೇನೆ ಎಂದು ಬಿಜೆಪಿ ಪಕ್ಷದ ಮುಖಂಡ, ವಕೀಲ ಜಿ. ದೇವರಾಜೇಗೌಡ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಮಾಜಿ ಸಚಿವರಾದ ಎಚ್.ಡಿ ರೇವಣ್ಣ ಅವರು ಹೇಳಿಕೆ ನೀಡುವಾಗ ನನ್ನ ವಿರುದ್ಧ ಸವಾಲು ಹಾಕಿದ್ದಾರೆ. ಅವರ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ಇದಕ್ಕೆ ತಕ್ಕ ಉತ್ತರ ಕೊಡಲು ದೆಹಲಿ ಪ್ರವಾಸ ಇದ್ದರೂ ಅನಿವಾರ್ಯವಾಗಿ ಮಾಧ್ಯಮದ ಮುಂದೆ ಬರಬೇಕಾಗಿದೆ. ರೇವಣ್ಣರ ಆಪ್ತರು ಹಾಗೂ ಹಿತೈಷಿ ವಕೀಲರೊಬ್ಬರೂ ಕೂಡ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಾನು ೭೦ ಕೋಟಿ ರು. ಆಸ್ತಿ ಮಾಡಿದ್ದೇನೆ ಎಂದು, ಆದರೆ ನಾನು ೨೦ ವರ್ಷದ ವಕೀಲರ ವೃತ್ತಿಯಲ್ಲಿ ಕೆಲಸ ಮಾಡಿದರೂ ನಾನೇ ಅಷ್ಟೊಂದು ಸಂಪಾದನೆ ಮಾಡಲು ಆಗಿಲ್ಲ. ಇವರು ಹೇಗೆ ಇಷ್ಟೊಂದು ಆಸ್ತಿ ಮಾಡಿದ್ದಾರೆ ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ. ನಾನೇನು ಖ್ಯಾತ ವಕೀಲನಲ್ಲ. ಹಿರಿಯ ವಕೀಲನಲ್ಲ. ೨೦೦೬ ರಲ್ಲಿ ಬೆಂಗಳೂರು ಯಲಹಂಕ ಬಳಿ ೩೩ ಎಕರೆ ಭೂಮಿ ಖರೀದಿ ಮಾಡಿದ್ದೇನೆ. ಪ್ರಸ್ತುತ ದರಕ್ಕೆ ಈಗ ೮೦ ಕೋಟಿ ರು.ಗೂ ಹೆಚ್ಚು ಬೆಲೆ ಬಾಳುತ್ತದೆ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕಂಪೆನಿ ಕೂಡ ಇದ್ದು, ಅದರಿಂದಲೂ ಕೂಡ ನಾನು ದುಡಿಮೆ ಮಾಡುತ್ತಿದ್ದೇನೆ. ನನಗೆ ಯಾವುದೇ ಬೇನಾಮಿ ಆಸ್ತಿ ಇಲ್ಲ. ರೇವಣ್ಣನವರೇ ನಿಮ್ಮ ಮನೆಯ ಸರಿಯಾದ ವಿಳಾಸ ಕೊಟ್ಟರೆ ದಾಖಲೆಗಳನ್ನು ಕೊರಿಯರ್ ಮಾಡುತ್ತೇನೆ. ಏಕೆಂದರೆ ಕೋರ್ಟ್ ನೋಟಿಸ್‌ಗಳು ನಿಮಗೆ ಸರಿಯಾಗಿ ತಲುಪುತ್ತಿಲ್ಲ. ನೀವು ಪರ್ಮನೆಂಟ್ ವಿಳಾಸ ಕೊಟ್ಟರೆ ಕಳಿಸಿಕೊಡುತ್ತೇನೆ’ ಎಂದು ತಿರುಗೇಟು ನೀಡಿದರು.‘ರೇವಣ್ಣನವರು ನನ್ನ ವಿರುದ್ಧ ಪೊಳ್ಳು ಎಂಬ ಅಸಂಬದ್ಧ ಪದ ಬಳಸಿದ್ದಾರೆ. ನಾನು ಹಾಕಿರೋ ಕೇಸ್‌ನಲ್ಲಿ ಅಪರಾದಿ ಎಂದು ಸಾಬೀತಾಗಿದೆ. ಹಿಪ್ಪೆ ಬೂತ್ ನಂಬರ್ ೨೪೪ರಲ್ಲಿ ಅಕ್ರಮವಾಗಿ ಮತದಾನಕ್ಕೆ ಸಹಕಾರ ನೀಡಿರುವ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಾಗಿತ್ತು. ಮತಗಟ್ಟೆ ಒಳಗೆ ನಿಂತು ಫೋರ್ಜರಿ ಮತ ಹಾಕಿಸಿದ್ದಾರೆ. ಮತ ಹಾಕುವ ಸಂದರ್ಭ ಅವರು ರಾಜ್ಯದ ಮಂತ್ರಿಗಳು, ರಾಜ್ಯಪಾಲರಿಂದ ಪ್ರಮಾಣವಚನ ಪಡೆದ ಸಚಿವ ಸರ್ಕಾರಿ ನೌಕರ ಆಗುತ್ತಾರೆ. ಒಬ್ಬ ಮಂತ್ರಿ, ನೌಕರ ಕಳ್ಳ ಮತ ಹಾಕಿಸಿದ್ದರೆ ಕಾನೂನಿನಲ್ಲಿ ಶಿಕ್ಷೆ ಇದೆ. ಪಡುವಲಹಿಪ್ಪೆಯ ಬೂತ್‌ನಲ್ಲಿ ಕಳ್ಳ ಮತ ಹಾಕಿಸಿದ್ದಾರೆ. ದೇವೇಗೌಡರ ಇಡೀ ಕುಟುಂಬದ ಮತಗಳು ಪಡುವಲಹಿಪ್ಪೆ ಬೂತ್‌ನಲ್ಲಿ ಇವೆ. ಒಟ್ಟು ೪೮ ಮತಗಳಿದ್ದು, ಬೂತ್‌ಗೆ ಯಾರೂ ಬಂದಿಲ್ಲದಿದ್ದರೂ ಚಲಾವಣೆ ಆಗಿದೆ. ಎಲ್ಲರ ಮತಗಳು ಕೂಡ ಖುದ್ದು ರೇವಣ್ಣನವರೇ ಚಲಾಯಿಸಿದ್ದಾರೆ. ಮತದಾನ ಮಾಡಿದ ನಂತರವೂ ಹಲವು ನಿಮಿಷಗಳ ಕಾಲ ಮತಗಟ್ಟೆಯಲ್ಲಿಯೇ ಇರುವ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೇ ಕೇಸ್‌ನಲ್ಲಿ ರೇವಣ್ಣನವರು ಅಪರಾಧಿ ಎಂದು ಸಾಬೀತಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿದ್ದಾರೆ’ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಕೆಲ ದಾಖಲೆಗಳನ್ನು ಪ್ರದರ್ಶಿಸಿದ ವಕೀಲ ದೇವರಾಜೇಗೌಡ.