ಸಾರಾಂಶ
ಕೊಳ್ಳೇಗಾಲದ ವಸಂತಕುಮಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಧರ್ ಅವರನ್ನು ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕ ಬಳಗದಿಂದ ಅಭಿನಂದಿಸಿ ಬೀಳ್ಕೂಡುಗೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನನ್ನ ಅವಧಿಯಲ್ಲಿ ಪ್ರಾಂಶುಪಾಲನಾಗಿ ಕಾಲೇಜು ಅಭಿವೃದ್ಧಿಗೆ ನನ್ನ ಕೈಲಾದ ಮಟ್ಟಿಗೆ ಅಳಿಲು ಸೇವೆ ಸಲ್ಲಿಸಿದ್ದು, ಸೇವೆ ನನಗೆ ತೃಪ್ತಿ ತಂದಿದೆ ಎಂದು ವಯೋ ನಿವೃತ್ತಿ ಹೊಂದಿದ ಶ್ರೀಧರ್ ಹೇಳಿದರು.ವಯೋನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಎಸ್‌ವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗ ಹಾಗೂ ಪ್ರಾಂಶುಪಾಲರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಸೇವಾ ಅವಧಿಯಲ್ಲಿ ಪ್ರತಿಯೊಬ್ಬ ಉಪನ್ಯಾಸಕರು, ಸಿಬ್ಬಂದಿ, ಅಧಿಕಾರಿ ವರ್ಗ ಕೆಲಸ, ಕಾರ್ಯ ನಿರ್ವಹಣೆಗೆ ಸಹಕಾರ ನೀಡಿದ್ದಾರೆ. ನನ್ನ ಅವಧಿಯಲ್ಲಿ ಉತ್ತಮ ಫಲಿತಾಂಶವನ್ನು ನೀಡಿದ ತೃಪ್ತಿ ನನಗಿದೆ. ಇದೀಗ ನಾನು ಸೇವೆ ಸಲ್ಲಿಸಿದ ಕಾಲೇಜಿಗೆ ಒಂದು ನೆನಪಿನ ಕಾಣಿಕೆಯಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಶುದ್ಧ ನೀರನ್ನು ಕುಡಿಯುವ ಸಲುವಾಗಿ ಆರ್.ಓ ಪ್ಲಾಂಟನ್ನು ಕೊಡುಗೆಯಾಗಿ ನೀಡಿದ್ದೇನೆ, ನನ್ನ ಅವಧಿಯಲ್ಲಿ ಸಲಹೆ ಮತ್ತು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ ಎಂದರು.ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್ ಮಾತನಾಡಿ, ಶ್ರೀಧರ್ ಅವರು ಪ್ರಾಂಶುಪಾಲರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು. ಈ ವೇಳೆ ಉಪ ಪ್ರಾಂಶುಪಾಲ ವಿಶ್ವನಾಥ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್.ಪಿ.ನರೇಂದ್ರನಾಥ್, ಉಪನ್ಯಾಸಕರಾದ ಮಹದೇವ, ದಿನೇಶ್ ಕುಮಾರ್, ವಸಂತಕುಮಾರಿ, ಶಾಂತಕುಮಾರಿ, ರೇಣುಕಾ, ಲೊಕ್ಕನಹಳ್ಳಿ ಕಾಲೇಜು ನಂಜಮ್ಮಣಿ ಇನ್ನಿತರಿದ್ದರು.