ಕೊಪ್ಪಳ ತಾಲೂಕಿನ ಇರಕಲ್ಲಗಡಾ - ಯಲಮಗೇರಿಯ ಈಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಕೊಪ್ಪಳ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ ಉದ್ಘಾಟಿಸಿದರು.
ಕೊಪ್ಪಳ: ವಿದ್ಯಾರ್ಥಿಗಳು ಒಳ್ಳೆಯ ಗುಣಗಳು ಹಾಗೂ ಗುರುಗಳಲ್ಲಿನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರ್ಶ ಗುಣಗಳು ಸಾಧನೆಗೆ ಪೂರಕ ಎಂದು ಕೊಪ್ಪಳ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ ಕರೆ ನೀಡಿದರು.
ತಾಲೂಕಿನ ಇರಕಲ್ಲಗಡಾ - ಯಲಮಗೇರಿಯ ಈಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆಯನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಈಶ್ವರ ಆಂಗ್ಲ ಮಾಧ್ಯಮ ಶಾಲೆಯನ್ನು 18 ವರ್ಷಗಳ ಹಿಂದೆ ತಟ್ಟಿಯಲ್ಲಿ ಆರಂಭಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ, ಸ್ವಂತ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗುಡಿ ಅವರಿಗೆ ಸಲ್ಲುತ್ತದೆ. ಅತ್ಯಂತ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಪಾಲಕರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡು ಅವರ ನಂಬಿಕೆ ಗಳಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಶಾಲೆಯನ್ನು ಹಸಿರೀಕರಣ ಮಾಡಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದು ಹೆಮ್ಮೆಯ ಸಂಗತಿ. ಇಂಥ ಉತ್ತಮ ಶಾಲೆ ಇಲ್ಲಿ ಕಟ್ಟಿರುವುದು ಈ ಭಾಗದ ಜನರ ಹಾಗೂ ವಿದ್ಯಾರ್ಥಿಗಳ ಸುದೈವವಾಗಿದೆ ಎಂದರು.ಕೊಪ್ಪಳ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಶಿಕ್ಷಣಕ್ಕೆ ಮನುಷ್ಯನ ಬದುಕನ್ನು ಮಾತ್ರವಲ್ಲ, ಎಲ್ಲ ರಂಗದಲ್ಲೂ ಮಹತ್ತರ ಬದಲಾವಣೆಯನ್ನು ತರುವ ಶಕ್ತಿ ಇದೆ. ಶಿಕ್ಷಣ ಅತ್ಯಂತ ಶಕ್ತಿಶಾಲಿ ಆಯುಧ ಎಂದರು.
ಮುಖಂಡರಾದ ಸಿದ್ದಪ್ಪ ನೀರಲೂಟಿ, ವೀರಬಸಪ್ಪ ಪಟ್ಟಣಶೆಟ್ಟಿ, ಪತ್ರಕರ್ತ ಜಗದೀಶ ಅಂಗಡಿ, ಕುಬೇರ ಮಜ್ಜಿಗಿ, ವೀರಣ್ಣ ಕಂಬಳಿ, ಯಲ್ಲಾಲಿಂಗ ಕತ್ತಿ, ಶಿವನಗೌಡ ಪೊಲೀಸ್‌ಪಾಟೀಲ್ ಇದ್ದರು.ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗುಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಿ.ಎಸ್. ಮೂಲಿ ಕಾರ್ಯಕ್ರಮ ನಿರೂಪಿಸಿದರು. ಶರಣಬಸವ ಸ್ವಾಗತಿಸಿದರು. ಅನುಶಾ ಎಂ.ಬಿ. ವಂದಿಸಿದರು.