ಕೊಪ್ಪಳ ನಗರದಲ್ಲಿ ಪೂಜೆ, ಆರತಿ ಹಾಗೂ ಭಾವಚಿತ್ರ ಮೆರವಣಿಗೆಯೊಂದಿಗೆ ಭಕ್ತಿಪೂರ್ವಕವಾಗಿ ಮಹಾವೀರ ಜಯಂತಿ ಆಚರಿಸಲಾಯಿತು. ನಗರದ ಎಸ್‌.ಎಸ್. ಜೈನ ಸಂಘದಲ್ಲಿ ಸಹ ಜಯಂತಿ ಆಚರಿಸಲಾಯಿತು.

ಕೊಪ್ಪಳ: ನಗರದಲ್ಲಿ ಪೂಜೆ, ಆರತಿ ಹಾಗೂ ಭಾವಚಿತ್ರ ಮೆರವಣಿಗೆಯೊಂದಿಗೆ ಭಕ್ತಿಪೂರ್ವಕವಾಗಿ ಮಹಾವೀರ ಜಯಂತಿ ಆಚರಿಸಲಾಯಿತು. ನಗರದ ಎಸ್‌.ಎಸ್. ಜೈನ ಸಂಘದಲ್ಲಿ ಸಹ ಜಯಂತಿ ಆಚರಿಸಲಾಯಿತು.

ಬೆಳಗ್ಗೆ ಶ್ರೀ ಮಹಾವೀರ ಸ್ವಾಮಿಯ ಜೈಕಾರಗಳೊಂದಿಗೆ ನಗರದ ಎಸ್.ಎಸ್. ಜೈನ ಸಂಘ, ಜೈನ ಪರಿವಾರದವರಿಂದ ನಗರದ ಪ್ರಮುಖ ರಸ್ತೆಯಲ್ಲಿ ಮಹಾವೀರರ ಭಾವಚಿತ್ರ ಮೆರವಣಿಗೆ ಜರುಗಿತು. ಪುರಾತನ ಜೈನ ಬಸದಿಯಲ್ಲಿ ಪೂಜೆ, ಆರತಿ ಧಾರ್ಮಿಕ ಪೂಜಾ ಕಾರ್ಯ ಜರುಗಿದವು. ಜೈನ ಸಾಧ್ವೀಜಿ ಶ್ರೀಸಂಯಮ ಪ್ರಿಯಾಜಿ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿದರು. ನಗರದ ಸಮಗ್ರ ಜೈನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಬಹುಮಾನಗಳಿಂದ ಸನ್ಮಾನಿಸಲಾಯಿತು.

ಎಸ್.ಎಸ್. ಜೈನ ಸಂಘದ ಮಹಿಳಾ ಮಂಡಳದ ಧನ ಸಹಯೋಗದಿಂದ ಬೇಸಿಗೆಯ ಬಿಸಿಲಿನ ತಾಪವನ್ನು ತಂಗಿಸಲು ಎಸ್.ಎಸ್. ಜೈನ ಸಂಘದ ಭವನದ ಪ್ರಾಂಗಣದಲ್ಲಿ ತಂಪು ಪಾನೀಯ ಹಾಗೂ ಮಜ್ಜಿಗೆಯ ಸೇವೆಯ ಆರವಟ್ಟಿಗೆ ಪ್ರಾರಂಭಿಸಲಾಯಿತು.

ನಗರದ ಕೋಟೆಯಲ್ಲಿರುವ 1008 ದಿಗಂಬರ ಪಾರ್ಶ್ವನಾಥ ಜೈನ ಬಸದಿಯಲ್ಲಿ 24ನೇ ತೀರ್ಥಂಕರ ಭಗವಾನ್‌ ಮಹಾವೀರ ಜಯಂತಿ ಆಚರಿಸಲಾಯಿತು. ಶ್ರಾವಕಿಯರು ಮಹಾವೀರ ಮೂರ್ತಿಯ ಮೆರವಣಿಗೆ ನಡೆಸಿ, ಮಹಾವೀರರ ಜನ್ಮ ಕಲ್ಯಾಣ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಿದರು.

ಸಂಘದ ಅಧ್ಯಕ್ಷ ಅಭಯಕುಮಾರ ಮೆಹತಾ, ಉಪಾಧ್ಯಕ್ಷ ಅಶೋಕಚಂದ ತಾಲೇಡಾ, ಗೌತಮಚಂದ ಜಾಂಗಡಾ, ಮಂತ್ರಿ ವಿಜಯ ಕುಮಾರ ಮೆಹತಾ, ಸಹ ಕಾರ್ಯಕರ್ತರಾದ ಮೇಘರಾಜ ರಾತಡಿಯಾ, ಮಹಾವೀರ ಮೆಹತಾ, ಪವನ ಕುಮಾರ ಪೋಕರ್ಣಾ, ರಿಕಬ ಕುಮಾರ ಸುರಾಣಾ, ಪ್ರವೀಣ ಕುಮಾರ ಮೆಹತಾ, ರೋಣಕ ಕುಮಾರ, ವಿನಯ ಕುಮಾರ ಇತರರಿದ್ದರು.

ಶಾಂತಿ ಪರಿಪಾಲನೆ ಅಗತ್ಯ: ಬದುಕಿನಲ್ಲಿ ಶಾಂತಿ ಪರಿಪಾಲನೆ ಅಗತ್ಯ ಎಂದು ಉಪ ತಹಸೀಲ್ದಾರ ಮುರಳೀಧರರಾವ್ ಕುಲಕರ್ಣಿ ಹೇಳಿದರು.ಕುಕನೂರು ಪಟ್ಟಣದ ಜೈನ ಮಂದಿರ ಹಾಗೂ ತಹಸೀಲ್ದಾರ್‌ ಕಚೇರಿಯಲ್ಲಿ ಜರುಗಿದ ಮಹಾವೀರ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಮಹಾವೀರರು ಮನುಷ್ಯನ ಅಂತರಾತ್ಮ ಶುದ್ಧೀಕರಣ ಕಾರ್ಯ ಮಾಡಿದರು. ಅವರ ತತ್ವ, ಬೋಧನೆಯಲ್ಲಿ ಅಹಿಂಸೆ, ಶಾಂತಿ, ತ್ಯಾಗಗಳ ಪರಿಪಾಲನೆ ಇದೆ. ಪ್ರತಿಯೊಬ್ಬ ಮನುಷ್ಯ ಅವುಗಳನ್ನು ಅನುಸರಿಸಿಕೊಂಡು ನಡೆದರೆ ಬದುಕು ಪಾವನ ಆಗುತ್ತದೆ ಎಂದರು.

ಮುಖಂಡ ಜಶ್ವಂತರಾಜ್ ಜೈನ್ ಮಾತನಾಡಿ, ಯಾರಿಗೂ ಕೆಟ್ಟದ್ದು ಮಾಡದೆ ಜೀವಿಸುವುದೇ ನಿಜವಾದ ಬದುಕು. ಬದುಕು ಎಂಬುದು ಬವಣೆಯಲ್ಲ. ಅದೊಂದು ಸುಂದರ ಕ್ಷಣ. ನಲಿವಿನಿಂದ ಅದನ್ನು ಆನಂದಿಸಬೇಕು ಎಂದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಾವೀರರ ಭಾವಚಿತ್ರ ಮೆರವಣಿಗೆ ಜರುಗಿತು. ಆನಂತರ ಜೈನ ಮಂದಿರದಲ್ಲಿ ಕಾರ್ಯಕ್ರಮ ಜರುಗಿತು. ಪ್ರಮುಖರಾದ ಸುಭಾಷಚಂದ್ರ, ರಿಕಬಚಂದ್, ರಮೇಶಚಂದ್, ಧರ್ಮಚಂದ್, ದಿಲಿಪಚಂದ್, ಗೌತಮ್ ಚಂದ್ ಹಾಗೂ ಜೈನ್ ಮಹಿಳಾ ಮಂಡಳದ ಪ್ರಮುಖರಿದ್ದರು.