ಸಾರಾಂಶ
- 35 ವರ್ಷಗಳ ಸುಧೀರ್ಘ ಹೋರಾಟಕ್ಕೆ ಸಿಕ್ಕ ಫಲ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಸಮಾನ ರೀತಿಯಲ್ಲಿ ನಮ್ಮ ಸರ್ಕಾರ ಮೀಸಲಾತಿ ಹಂಚಿಕೆ ಮಾಡಿದ್ದು, ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯವಾಗಿಲ್ಲ. ಆ ತರಹ ಆಗಿದ್ದರೆ ಸರಿ ಮಾಡೋಣ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಶನಿವಾರ ಮಾದಿಗ ಮಹಾಸಭಾ ಹಮ್ಮಿಕೊಂಡಿದ್ದ ಒಳ ಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಿಗ ಸಮುದಾಯದ 35 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಿಕ್ಕ ಫಲವೇ ಒಳ ಮೀಸಲಾತಿ ಎಂದರು.ಒಳ ಮೀಸಲಾತಿ ನೀಡುವಂತಹ ಐತಿಹಾಸಿಕ ತೀರ್ಮಾನವನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ. 101 ಜಾತಿಗಳಿಗೂ ಸಮಾನ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿದ್ದೇವೆ. ಒಳ ಮೀಸಲಾತಿ ಜಾರಿಗೊಂಡ ಬಳಿಕ ದಾವಣಗೆರೆಯಲ್ಲಿ ಇಂದು ಮೊದಲ ಕಾರ್ಯಕ್ರಮ ನಡೆಯುತ್ತಿದ್ದು, ಸಮಾಜದ ಮುಖ್ಯಸ್ಥರಿಂದ ಇಂತಹದ್ದೊಂದು ಬೃಹತ್ ಸಮಾರಂಭ ಆಯೋಜನೆಗೊಂಡಿದೆ ಎಂದು ಅವರು ತಿಳಿಸಿದರು.
ತಮ್ಮ ಸರ್ಕಾರ ಜಾರಿಗೊಳಿಸಿದ ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯವಾಗಿಲ್ಲ. ಒಂದು ವೇಳೆ ಅನ್ಯಾಯವಾಗಿದ್ದರೆ ಸರಿಪಡಿಸುವ ಕೆಲಸವನ್ನೂ ನಮ್ಮ ಸರ್ಕಾರ ಸರಿ ಮಾಡುತ್ತದೆ ಎಂದು ಕೆಲ ಸಮುದಾಯಗಳು ಒಳ ಮೀಸಲಾತಿಯಿಂದ ತಮಗೆ ಅನ್ಯಾಯವಾಗುತ್ತಿದೆಯೆಂದು ಹೋರಾಟ ಮಾಡುತ್ತಿರುವ ಕುರಿತಂತೆ ಅವರು ಪ್ರತಿಕ್ರಿಯಿಸಿದರು.ಪಡಿತರ ಚೀಟಿಗಳನ್ನು ರದ್ಧುಪಡಿಸಿರುವುದು ಕೇಂದ್ರ ಸರ್ಕಾರದ ತೀರ್ಮಾನವಾಗಿದೆ. ಕೇಂದ್ರ ಸರ್ಕಾರದವರೇ ಸರ್ವೇ ಮಾಡಿದ್ದಾರೆ. ಅದರ ಪ್ರಕಾರವೇ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾರೆ. 1.20 ಲಕ್ಷ ರು.ಗೂ ಅದಿಕ ಆದಾಯವಿದ್ದರೆ ರದ್ಧು ಮಾಡಬೇಕೆಂದು ಮಾಡಿದ್ದಾರೆ. ಅದರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಕಾರ್ಡ್ ರದ್ದತಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಗಣೇಶ ಹಬ್ಬದಲ್ಲಿ ಒಂದಲ್ಲ ಒಂದು ಸಮಸ್ಯೆಯಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವದಲ್ಲಿ ಆದ ಅಪಘಾತದ ಘಟನೆಯೂ ನಿದರ್ಶನವಾಗಿದೆ. ಗಣೇಶೋತ್ಸವ ವೇಳೆ ಪೂರ್ಣ ಪ್ರಮಾಣದಲ್ಲಿ ಬಂದೋಬಸ್ತ್ ಮಾಡಬೇಕಾಗುತ್ತದೆ. ಪಟಾಕಿ ಹೊಡೆಯುವುದನ್ನು ನಿಲ್ಲಿಸದಿದ್ದರೆ ಇದೆಲ್ಲವೂ ಸರಿ ಹೋಗುವುದಿಲ್ಲ ಎಂದು ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದರು.- - -
(ಫೋಟೋ: ಮುನಿಯಪ್ಪ)