ಸಾರಾಂಶ
- ಹೊನ್ನಾಳಿಯಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಟೀಕೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಲೇಲ್ಲ ರಾಜ್ಯದಲ್ಲಿ ಕೋಮುಗಲಭೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಹಿಂದೂಗಳು ಬೆಲೆ ತೆರುವಂತಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಹಾಗೂ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಹೊನ್ನಾಳಿ ತಾಲೂಕು ಬಿಜೆಪಿ ಘಟಕದಿಂದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮದ್ದೂರಿನಲ್ಲಿ ಕಲ್ಲು ತೂರಾಟ ಪೂರ್ವನಿಯೋಜಿತ ಕೃತ್ಯ. ಈ ಘಟನೆಗೂ ಮುನ್ನ ಸ್ಥಳೀಯ ಮಸೀದಿಯಲ್ಲಿ ಕಲ್ಲು ಹಾಗೂ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಶೇಖರಿಸಿಟ್ಟಿದ್ದು, ಬೇರೆ ಕಡೆಗಳಿಂದಲೂ ಅಲ್ಪಸಂಖ್ಯಾತ ಗೂಂಡಾಗಳು ಮದ್ದೂರಿಗೆ ಅಗಮಿಸಿದ್ದರು ಎಂಬ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇತ್ತು. ಆದರೆ ಅಧಿಕಾರಸ್ಥರ ದರ್ಪಕ್ಕೆ ಹೆದರಿ ಸುಮ್ಮನಾಗಿದ್ದಾರೆ ಎಂದು ಆರೋಪಿಸಿದರು.ಮದ್ದೂರು ಪ್ರಕರಣದಲ್ಲಿ ಕೇವಲ 21 ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ 500 ಹಿಂದೂಗಳ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಶ್ನೆ ಮಾಡಿದರೆ. ಹಿಂದೂಗಳ ವಿರುದ್ದ ಪ್ರಕರಣ ದಾಖಲಿಸಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಗಲಭೆಯಲ್ಲಿ ಮಹಿಳೆಯರ ಮೇಲೆ ಪೊಲೀಸರು ದರ್ಪ ಮೆರದಿದ್ದಾರೆ. ಮಹಿಳೆಯರ ಮೇಲೆ ಲಾಠಿ ಬೀಸಿದ ಪೊಲೀಸರನ್ನು ಕೂಡ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಧರ್ಮದಲ್ಲಿ ಪುನರ್ಜನ್ಮ ಇಲ್ಲ:ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಮುಂದಿನ ಜನ್ಮ ಇದ್ದರೆ ನಾನು ಮುಸ್ಲಿಂ ಧರ್ಮದಲ್ಲಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆ. ಮುಂದಿನ ಜನ್ಮದ ಬಗ್ಗೆ ಮುಸ್ಲಿಂ ಧರ್ಮದಲ್ಲಿ ನಂಬಿಕೆ ಇಲ್ಲ. ಹಾಗಾಗಿ ನೀವು ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ ಎಂದು ಶಾಸಕ ಸಂಗಮೇಶ್ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಹಿಂದೂಗಳ ಮತದಿಂದ ಗೆದ್ದಿರುವ ಸಂಗಮೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಎಸ್.ಎಸ್. ಬೀರಪ್ಪ, ಶಿವಾನಂದ ಸಿ.ಆರ್. ಮಾತನಾಡಿದರು.ಮಾನವ ಸರಪಳಿ:
ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಕೆಲ ತಾಸು ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ರಸ್ತೆತಡೆ ನಡೆಸಿದರು.ಬಿಜೆಪಿ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ನೆಲಹೊನ್ನೆ ಮಂಜುನಾಥ್, ಮುಖಂಡರಾದ ಮಾರುತಿ ನಾಯ್ಕ್, ದೊಡ್ಡೇರಿ ರಾಜಣ್ಣ, ಮಹೇಂದ್ರಗೌಡ, ಜುಂಜ್ಯಾನಾಯ್ಕ್, ಕೊನಾಯಕನಹಳ್ಳಿ ಮಂಜುನಾಥ್ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
- - -(ಕೋಟ್) ವಿಧಾನಸೌಧ, ಹಾವೇರಿ, ಭದ್ರಾವತಿ, ತರೀಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶದ್ರೋಹಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.- - -
-13ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ತಾಲೂಕು ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.