ಭಾಷೆ ಅವನತಿಯಾದರೆ ಸಂಸ್ಕೃತಿ ನಾಶ: ಸೂರಿ ಶ್ರೀನಿವಾಸ್‌

| Published : Nov 06 2024, 12:32 AM IST

ಭಾಷೆ ಅವನತಿಯಾದರೆ ಸಂಸ್ಕೃತಿ ನಾಶ: ಸೂರಿ ಶ್ರೀನಿವಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಭಾಷೆ ಅವನತಿಯಾದರೆ ನಮ್ಮ ಸಂಸ್ಕೃತಿಯೂ ನಾಶವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್‌ ತಿಳಿಸಿದರು.

ನರಸಿಂಹರಾಜಪುರಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭಾಷೆ ಅವನತಿಯಾದರೆ ನಮ್ಮ ಸಂಸ್ಕೃತಿಯೂ ನಾಶವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್‌ ತಿಳಿಸಿದರು.

ಭಾನುವಾರ ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ಸರ್ಕಲ್‌ ಗೆ ಆಗಮಿಸಿದ ಕನ್ನಡ ಜ್ಯೋತಿ ರಥ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕನ್ನಡ ಭಾಷೆ ಉಳಿಸುವ ದೃಷ್ಠಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರತಿ ತಾಲೂಕುಗಳಲ್ಲೂ ರಥ ಯಾತ್ರೆ ಬರುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ವಿವಿಧ ತಾಲೂಕಿಗೆ ಕನ್ನಡ ಜ್ಯೋತಿ ರಥ ಯಾತ್ರೆ ಬಂದಿದೆ. ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಒಟ್ಟಾಗಿ ರಥ ಯಾತ್ರೆ ಹಮ್ಮಿಕೊಂಡಿದೆ. ಇಂಗ್ಲೀಷ್‌ ವ್ಯಾಮೋಹದಿಂದ ಕನ್ನಡ ಭಾಷೆಗೆ ದಕ್ಕೆಯಾಗಬಾರದು. ಸರ್ಕಾರ ಕನ್ನಡ ಭಾಷೆಗೆ ಅಗ್ರ ಸ್ಥಾನ ನೀಡಿದೆ. ಕನ್ನಡ ಮನಸ್ಸುಗಳು ಒಟ್ಟಾಗಿ ಕನ್ನಡಕ್ಕೆ ಸಂಭಂದಿಸಿದ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ ನಡೆಸಬೇಕು. ಸಾಹಿತ್ಯ ಸಮ್ಮೇಳನಗಳಿಗೆ ರಥ ಯಾತ್ರೆ ಅನಿವಾರ್ಯ. ರಥ ಯಾತ್ರೆಯಿಂದ ಕನ್ನಡಗರಿಗೆ ಭಾಷಾಭಿಮಾನ ಜಾಸ್ತಿಯಾಗಲಿದೆ. ವಿಶೇಷವಾಗಿ ರಾಜ್ಯಾದ್ಯಂತ ಆಟೋ ಚಾಲಕರ ಕನ್ನಡ ಪ್ರೇಮ ಶ್ಲಾಘನೀಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್‌ ಮಾತನಾಡಿ, ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮಳನದ ಅಂಗವಾಗಿ ಕನ್ನಡ ರಥ ಯಾತ್ರೆ ನರಸಿಂಹರಾಜಪುರಕ್ಕೆ ಬಂದಿದ್ದು ಎಲ್ಲರೂ ಒಟ್ಟಾಗಿ ಸ್ವಾಗತಿಸಿದ್ದೇವೆ. ಈ ಹಿಂದೆಯೂ ಕನ್ನಡ ರಥ ಯಾತ್ರೆ ಬಂದಿದ್ದು ತಾಲೂಕಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಇದೇ ರೀತಿಯಾಗಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ರಥ ಯಾತ್ರೆ ಕೈಗೊಂಡರೆ ಜನರಲ್ಲಿ ಕನ್ನಡದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಲಿದೆ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು ನರಸಿಂಹರಾಜಪುರದಿಂದಲೂ ಎಲ್ಲಾ ಕನ್ನಡಿಗರು ಒಟ್ಟಾಗಿ ಹೋಗೋಣ ಎಂದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಕನ್ನಡ ಅಸ್ಮಿತೆ ಉಳಿಸುವ ದೃಷ್ಟಿಯಿಂದ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಒಟ್ಟಾಗಿ ರಥ ಯಾತ್ರೆ ಹಮ್ಮಿಕೊಂಡಿದೆ. ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಲು ಸಾಧ್ಯವಿಲ್ಲ ಎಂದು ಎಲ್ಲಾ ತಾಲೂಕು ,ಗ್ರಾಮ ಗಳಲ್ಲೂ ಕನ್ನಡ ರಥ ಯಾತ್ರೆ ಬಂದಿದ್ದು ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕನ್ನಡಕ್ಕೆ ಅವಮಾನ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸೂಚನೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಸರ್ಕಾರ ಅರ್ಹರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂದರು.

ತಹಸೀಲ್ದಾರ್‌ ತನುಜಾ ಟಿ.ಸವದತ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಇಮ್ರಾನ್ ಬೇಗ್‌ ಮಾತನಾಡಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಸುರೈಯಾಭಾನು, ಉಪಾಧ್ಯಕ್ಷೆ ಉಮಾ, ಸದಸ್ಯೆ ಜುಬೇದ, ತಾಲೂಕು ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಭಾಗ್ಯ ನಂಜುಂಡ ಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ಮಹಿಳಾ ಘಟಕ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್,ಎಪಿಎಂಸಿ ಸದಸ್ಯ ಎಚ್.ಎಂ.ಶಿವಣ್ಣ, ಶೃಂಗೇರಿ ವಾಲ್ಮೀಕಿ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್, ಭದ್ರಾ ಸಹಕಾರ ಸಂಘದ ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ, ಹಿರಿಯ ಕನ್ನಡದ ಕಟ್ಟಾಳು ಪಿ.ಸಿ.ಮ್ಯಾಥ್ಯೂ, ಕೆಪಿಸಿಸಿ ಸದಸ್ಯ ಅಂಜುಂ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಮಂಜುನಾಥ್‌, ಪಪಂ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್‌, ವಿವಿಧ ಗ್ರಾಪಂ ಸದಸ್ಯರು,ಪಿಡಿಒಗಳು, ಪಟ್ಟಣದ ನಾಗರಿಕರು ಭಾಗವಹಿಸಿದ್ದರು. ತರೀಕೆರೆಯಿಂದ ಬಂದ ರಥವನ್ನುನರಸಿಂಹರಾಜಪುರ ತಾಲೂಕಿನ ಗಡಿಭಾಗದ ಉಂಬಳೆ ಬೈಲಿನಲ್ಲಿ ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಸ್ವಾಗತಿಸಿದರು. ನಂತರ ಕುದುರೆಗುಂಡಿ ಸಮೀಪದಲ್ಲಿ ರಥ ಬೀಳ್ಕೊಡಲಾಯಿತು.