ಬಳ್ಳಾರಿ: ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿಯಿಂದ ಜಾಗತಿಕ ವ್ಯಾಪಾರ ವಹಿವಾಟುಗಳು ಹೊಯ್ದಾಟ ಎದುರಿಸುತ್ತಿರುವ ನಡುವೆ ಪಶ್ಚಿಮ ಏಷ್ಯಾದ ಸಂಘರ್ಷವು ಗಣಿ ಜಿಲ್ಲೆಯ ಜೀನ್ಸ್ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ.
ಭಾರತದ ದಕ್ಷಿಣ ರಾಜ್ಯಗಳು ಸೇರಿದಂತೆ ವಿದೇಶಕ್ಕೆ ರಫ್ತಾಗುತ್ತಿದ್ದ ಇಲ್ಲಿನ ಜೀನ್ಸ್ ಉಡುಪುಗಳಿಗೆ ತೀವ್ರ ಬೇಡಿಕೆ ಕುಸಿದಿದ್ದು ಜೀನ್ಸ್ ಉದ್ಯಮ ಆಶ್ರಯಿಸಿದವರು ತೊಳಲಾಟ ಎದುರಿಸುತ್ತಿದ್ದಾರೆ. ದುಬೈ, ಸಿಂಗಾಪುರ ಸೇರಿದಂತೆ 12 ದೇಶಗಳಿಗೆ ಬಳ್ಳಾರಿ ಜೀನ್ಸ್ ರಫ್ತಾಗುತ್ತಿತ್ತು. ತ್ರಿರಾಷ್ಟ್ರಗಳ ನಡುವಿನ ಯುದ್ಧದುನ್ಮಾದ ಜೀನ್ಸ್ ಉಡುಪುಗಳ ಬೇಡಿಕೆಯನ್ನು ಭಾಗಶಃ ಕುಸಿಯುವಂತೆ ಮಾಡಿದೆ. ಯುದ್ಧ ಕಾರಣಕ್ಕೆ ನೆರೆಯ ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಿರುವುದರಿಂದ ಜೀನ್ಸ್ ಉಡುಪುಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ.ಏತನ್ಮಧ್ಯೆ ಬಳ್ಳಾರಿ ಜೀನ್ಸ್ ಉತ್ಪನ್ನಗಳಿಗೆ ಬಳಕೆಯಾಗುತ್ತಿದ್ದ ಕಚ್ಚಾ ಪದಾರ್ಥವಾದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್, ಪೊಟ್ಯಾಸಿಯಂ ಪರ್ಮಾಂಗನೇಟ್ ಮತ್ತಿತರ ಜೀನ್ಸ್ ಕೆಮಿಕಲ್ಸ್ ಗಳ ಆಮದು ಸಂಪೂರ್ಣ ಬಂದ್ ಆಗಿದೆ. ಇದು ಜೀನ್ಸ್ ಉಡುಪುಗಳಿಗೆ ಬಣ್ಣ ಲೇಪಿಸಲು ಈ ಕೆಮಿಕಲ್ಸ್‌ಗಳ ಬಳಕೆ ಮಾಡಲಾಗುತ್ತದೆ. ಈ ಹಿಂದಿನಿಂದಲೂ ಜೀನ್ಸ್ ಕೆಮಿಕಲ್‌ಗೆ ಹೊರ ದೇಶವನ್ನು ಅವಲಂಬಿಸಲಾಗಿದ್ದು, ಅಮೆರಿಕ- ಇರಾನ್ ಯುದ್ಧ ಶುರುಗೊಂಡ ಬಳಿಕ ಕೆಮಿಕಲ್ಸ್ ನ ಆಮದು ಸ್ಥಗಿತವಾಗಿರುವುದು ಜೀನ್ಸ್ ಉತ್ಪಾದನೆಗೆ ದೊಡ್ಡ ಕೊಕ್ಕೆ ಬಿದ್ದಿದೆ.
ಕೆಮಿಕಲ್ಸ್ ಆಮದು ನಿಂತ ಬಳಿಕ ಜೀನ್ಸ್ ಉತ್ಪಾದನೆ ಭಾಗಶಃ ನಿಲುಗಡೆಯಾಗಿದೆ. ಯುಗಾದಿ ಹಾಗೂ ರಂಜಾನ್ ಹಬ್ಬಗಳ ವೇಳೆ ಹೆಚ್ಚಿನ ಪ್ರಮಾಣದ ಜೀನ್ಸ್ ಉಡುಪುಗಳನ್ನು ರಫ್ತು ಮಾಡುತ್ತಿದ್ದ ಇಲ್ಲಿನ ಜೀನ್ಸ್ ಉದ್ಯಮಿಗಳು ಈ ಬಾರಿ ಕೆಲಸವಿಲ್ಲದೇ ಕುಳಿತಿದ್ದಾರೆ. ಯುದ್ಧ ಶುರು ಮುನ್ನ ಉತ್ಪಾದಿಸಲಾಗಿದ್ದ ಜೀನ್ಸ್ ಉಡುಪುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಹಬ್ಬಕ್ಕೆ ಬೇಡಿಕೆಯಿರುವ ಜೀನ್ಸ್ ಉಡುಪುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಬೇಡಿಕೆಯಿರುವ ಜೀನ್ಸ್ ಉಡುಪುಗಳ ಪೂರೈಕೆ ಸಾಧ್ಯವಾಗದೇ ಒದ್ದಾಡುತ್ತಿದ್ದೇವೆ. ಈಗಾಗಲೇ ಮುಂಗಡ ಹಣ ಪಡೆದುಕೊಂಡಿರುವ ನಾವು, ಉಡುಪುಗಳನ್ನು ಪೂರೈಸಲಾಗದ ಸ್ಥಿತಿಯಲ್ಲಿದ್ದೇವೆ. ಇರಾನ್, ಅಮೆರಿಕ- ಇಸ್ರೇಲ್ ಯುದ್ಧ ಬೇಗ ಮುಗಿದರಷ್ಟೇ ಜೀನ್ಸ್ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಈ ಬಾರಿ ಬಳ್ಳಾರಿ ಜೀನ್ಸ್ ಉದ್ಯಮದಿಂದಲೇ ಹತ್ತಾರು ಕೋಟಿ ವ್ಯವಹಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಜೀನ್ಸ್ ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ನಗರದಲ್ಲಿ 450ಕ್ಕೂ ಹೆಚ್ಚು ಜೀನ್ಸ್ ಘಟಕಗಳಿದ್ದು, ಸಾವಿರಾರು ಕಾರ್ಮಿಕರು ಜೀನ್ಸ್ ಉದ್ಯಮವನ್ನೇ ಆಶ್ರಯಿಸಿದ್ದಾರೆ.ಜೀನ್ಸ್ ಉಡುಪುಗಳಿಗೆ ಬಳಕೆ ಮಾಡುವ ಕೆಮಿಕಲ್ ಹೊರ ರಾಷ್ಟ್ರಗಳಿಂದ ತರಿಸಿಕೊಳ್ಳಲಾಗುತ್ತಿತ್ತು. ಯುದ್ಧ ಶುರುವಾದ ಬಳಿಕ ಆಮದು ಸ್ಥಿಗಿತವಾಗಿದೆ. ಯುದ್ಧ ಮುಗಿಯುವವರೆಗೆ ಜೀನ್ಸ್ ಉಡುಪುಗಳ ರಫ್ತು ಸಹ ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ ಜೀನ್ಸ್ ಉದ್ಯಮಿಗಳು ಆತಂಕದಲ್ಲಿದ್ದಾರೆ ಎನ್ನುತ್ತಾರೆ ಜೀನ್ಸ್ ವ್ಯಾಪಾರಿ ರಮಣರೆಡ್ಡಿ.