ಕುಂದಗೋಳ:

ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಲಾರಿ ಹಾಗೂ ಟಿಪ್ಪರ್‌ಗಳು ಓವರ್‌ ಲೋಡ್‌ ಹೇರಿಕೊಂಡು ವೇಗವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರು, ಪ್ರಯಾಣಿಕರು ಬಲಿಯಾಗುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಎಚ್ಚೆತ್ತುಗೊಳ್ಳದಿದ್ದರೆ ನಾನೇ ರಸ್ತೆಗಿಳಿದು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಎಂ.ಆರ್‌. ಪಾಟೀಲ ಎಚ್ಚರಿಕೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಓವರ್‌ ಲೋಡ್‌ ಲಾರಿ, ಟಿಪ್ಪರ್‌ಗಳಿಂದ ಅಮಾಯಕರು ಸಾವನ್ನಪುತ್ತಿದ್ದಾರೆ. ವಾಹನ ಚಾಲಕರೂ ಸಹ ನಿಯಮ ಪಾಲಿಸುತ್ತಿಲ್ಲ. ಓವರ್‌ ಲೋಡ್‌ ಹಾಕಿಕೊಂಡು ಸಂಚರಿಸುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಹರಿಹಾಯ್ದರು.

ಇನ್ನು ಮುಂದೆ ಆರ್‌ಟಿಒ, ಸಾರಿಗೆ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಮುಂದಾಗದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಇದಕ್ಕೆ ಅಧಿಕಾರಿಗಳು ಅವಕಾಶ ನೀಡಿದೆ ಕಾನೂನು ಚೌಕಟ್ಟಿನಡಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ರೈತರು ಬೈಕ್‌ನಲ್ಲಿ ಗಡಿಬಿಡಿಯಲ್ಲಿ ಹೊಲದ ಕಾರ್ಯಕ್ಕೆ ಹೋಗುವಾಗ ಪೊಲೀಸರು ದಂಡ ವಿಧಿಸುವುದನ್ನು ನಿಲ್ಲಿಸಿ. ಯಾರಾದರೂ ರಸ್ತೆ ನಿಯಮ ಉಲ್ಲಂಘಿಸುತ್ತಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಶಾಸಕರು ಸೂಚಿಸಿದರು.


ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ ಸಾರಿಗೆ ಇಲಾಖೆಯ ಮೇಲೆ ಸಾಕಷ್ಟು ದೂರುಗಳಿದ್ದು ಅವುಗಳನ್ನು ಇಲಾಖೆ ಅಧಿಕಾರಿಗಳು ಸರಿಪಡಿಸಿಕೊಂಡು ಸುಸಜ್ಜಿತವಾದ ಬಸ್‌ಗಳನ್ನು ಮಾತ್ರ ರಸ್ತೆಯಲ್ಲಿ ಓಡಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಆಕ್ರೋಶಗೊಂಡ ಶಾಸಕರು, ಯಾರು ಸಭೆಗೆ ಬಂದಿಲ್ಲವೋ ಅವರಿಗೆ ಕೂಡಲೇ ನೋಟಿಸ್‌ ನೀಡುವಂತೆ ತಹಸೀಲ್ದಾರ್‌ಗೆ ತಿಳಿಸಿದರು.

ಮುಖಂಡ ಎ.ಬಿ. ಉಪ್ಪಿನ, ರಾಜು ಪುಟ್ಟಣ್ಣವರ, ಪ್ರಕಾಶಗೌಡ ಪಾಟೀಲ ಮಾತನಾಡಿದರು. ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ಓವರ್ ಲೋಡ್ ವಾಹನಗಳು ಚಲಿಸದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು, ಅಧಿಕಾರಿಗಳು ಹಾಗೂ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ರಸ್ತೆ ನಿಯಮ ಪಾಲಿಸಲು ಹಾಗೂ ಓವರ್ ಲೋಡ್ ಮಾಡದಂತೆ ತಾಕಿತು ಮಾಡಲಾಗುವುದು ಎಂದರು.

ಸಭೆಯಲ್ಲಿ ಮುಖಂಡರಾದ ಎನ್.ಎನ್. ಪಾಟೀಲ್, ಮಾಲತೇಶ ಶ್ಯಾಗೋಟಿ, ಉಮೇಶ ಹೆಬಸೂರ, ಗಣೇಶ ಕುಕಾಟೆ, ಕಲ್ಲಪ್ಪ ಹರಕುಣಿ, ಗಿರೀಶಗೌಡ ಪಾಟೀಲ್, ಸತೀಶ್ ಪಾಟೀಲ್ ಸೇರಿದಂತೆ ಇಲಾಖಾಧಿಕಾರಿಗಳು ಇದ್ದರು.