ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಬಡ ಹಾಗೂ ಸಣ್ಣ ಹಿಡುವಳಿ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ವಿವಿಧ ಯೋಜನೆಗಳಲ್ಲಿ ಬೋರ್‌ವೆಲ್ ಹಾಗೂ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ಕೊಡುತ್ತಿದೆ. ಆದರೆ, ಇದನ್ನು ಕಲ್ಪಿಸಬೇಕಿರುವ ಹೆಸ್ಕಾಂ ಮಾತ್ರ ಉಚಿತವಾಗಿ ರೈತರಿಗೆ ನೀಡದೇ ಇದರಲ್ಲೂ ಭಷ್ಟಚಾರ ನಡೆಸುತ್ತಿದೆ. ಹೊಸ ಟಿಸಿ (ವಿದ್ಯುತ್ ಟ್ರಾನ್ಸಫಾರ್ಮರ್) ಕೊಡಲು, ಕೆಟ್ಟಿರುವ ಟಿಸಿ ರಿಪೇರಿ ಮಾಡಿಸಿಕೊಡಲು ಕೆಲವು ಕಡೆಗಳಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ. ಸಾಕಷ್ಟು ಬಾರಿ ಎಚ್ಚರಿಸಿದರೂ ರೈತರಿಂದ ಹಣ ಪಡೆಯುವುದು ನಿಂತಿಲ್ಲ. ಈ ಕುರಿತು ಕೆಡಿಪಿ ಸಭೆಯಲ್ಲೇ ಸ್ವತಃ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಹೇಗೆಲ್ಲ ಹಣ ವಸೂಲಿ?
ಸರ್ಕಾರದಿಂದ ವಿವಿಧ 9 ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿ ರೈತರಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕೊಡಬೇಕಿರುತ್ತದೆ. ಆದರೆ, ಸಂಪರ್ಕ ಕೊಡುವಾಗ ಸ್ಥಳ ಪರಿಶೀಲನೆಗೆ ಬರುವ ಕೆಲವು ಅಧಿಕಾರಿಗಳು ರೈತರಿಗೆ ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ಕೊಟ್ಟವರಿಗೆ ಟಿಸಿ(ವಿದ್ಯುತ್ ಪರಿವರ್ತಕ) ಅಳವಡಿಸುತ್ತಾರೆ. ಹಣ ಕೊಡದ ರೈತರಿಗೆ ಎಲ್‌ಟಿ(ಲೋ ಟೆನ್ಷನ್) ಲೈನ್ ಹಾಕಿ ಕೊಡುತ್ತಾರೆ. ಹೀಗೆ ಮಾಡುವುದರಿಂದ ಹಣ ಕೊಟ್ಟು ಟಿಸಿ ಪಡೆವರಿಗೆ ಅನುಕೂಲವಾಗುತ್ತದೆ. ಇನ್ನೊಂದೆಡೆ ರೈತರ ಜಮೀನುಗಳಲ್ಲಿನ ಟಿಸಿಗಳು ಸುಟ್ಟಲ್ಲಿ ರೈತರು ಮಾಹಿತಿ ತಿಳಿಸಿದಾಗ ವಿದ್ಯುತ್ ಇಲಾಖೆಯಿಂದಲೇ 24 ಗಂಟೆಗಳಲ್ಲಿ ಉಚಿತವಾಗಿ ರಿಪೇರಿ ಮಾಡಿ ಅಥವಾ ಬದಲಿಸಿ ಕೊಡಬೇಕೆಂಬ ನಿಯಮವಿದೆ. ಆದರೆ, ಯಾವ ರೈತರು ಹಣ ಕೊಡುತ್ತಾರೋ ಅಂತಹ ರೈತರಿಗೆ ಮಾತ್ರ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿ ಕಳ್ಳಾಟ ನಡೆಸಿದ್ದಾರೆ.ತ್ವರಿತ ಆಗದ ರಿಪೇರಿ:ಸಾಮಾನ್ಯ ದಿನಗಳಲ್ಲಿ ಟಿಸಿ ಹಾಳಾಗುವ ಸಂಭವ 10 ಪರ್ಸೆಂಟ್ ನಷ್ಟಿದ್ದರೆ ಮಳೆಗಾಲದಲ್ಲಿ 20 ಪರ್ಸೆಂಟ್‌ನಷ್ಟು ಹಾಳಾಗುತ್ತವೆ. ಹೀಗಾಗಿ ಪ್ರತಿ ಹೆಸ್ಕಾಂ ವಿಭಾಗೀಯ ಕಚೇರಿಗಳಲ್ಲಿ 50 ರಿಂದ 60 ಟಿಸಿಗಳು ರಿಪೇರಿಗೆ ಬಂದು ವಾರಗಟ್ಟಲೇ ಬಿದ್ದಿವೆ. ಇವುಗಳನ್ನು ವೇಗವಾಗಿ ದುರಸ್ತಿಗೊಳಿಸಿ ಅಳವಡಿಸುವ ಕೆಲಸ ಇಲಾಖೆಯಲ್ಲಿನ ಸಂಬಂಧಿಸಿದ ಅಧಿಕಾರಿಗಳಿಂದ ಆಗಬೇಕಿದೆ.ಸಿಬ್ಬಂದಿಗೆ ಸಚಿವರ ತರಾಟೆ:
ಫಲಾನುಭವಿಗಳು ದುಡ್ಡು ಕೊಟ್ಟರೆ ಟಿಸಿ ಕೊಡ್ತಿರಿ, ಕೊಡದವರಿಗೆ ಎಲ್‌ಟಿ ಕನೆಕ್ಷನ್ ಕೊಡ್ತಿರಿ, ಯಾವ ಆಧಾರದ ಮೇಲೆ ಟಿಸಿ ಹಾಗೂ ಎಲ್‌ಟಿ ಕನೆಕ್ಷನ್ ಕೊಡ್ತಿರೀ?. ಇಲಾಖೆಯ ವಾತವರಣ ಹದಗೆಟ್ಟಿದ್ದು, ನಿಮ್ಮ ಸಿಸ್ಟಮ್ ನನಗೆ ಸರಿ ಕಾಣುತ್ತಿಲ್ಲ. ರೈತರು ಹಾಗೂ ಫಲಾನುಭವಿಗಳಿಂದ ಹಣ ಸುಲಿಗೆ ಮಾಡದೆ ನಿಮ್ಮ ಮಾನದಂಡಗಳ ಪ್ರಕಾರ ಕೆಲಸ ಮಾಡಲಾದರೇ ಮಾಡಿ, ಇಲ್ಲದಿದ್ದರೇ ಜಾಗ ಖಾಲಿ ಮಾಡಿ. ಇದೆ ಲಾಸ್ಟ್ ವಾರ್ನಿಂಗ್, ನೀವು ಬದಲಾವಣೆ ಆಗದಿದ್ದರೇ, ನಿಮ್ಮನ್ನೇ ಬದಲಾಯಿಸಬೇಕಾಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.---------------------------ಕೋಟ್
ರೈತರ ಜಮೀನುಗಳಲ್ಲಿರುವ ಟಿಸಿ ಸುಟ್ಟರೆ ಮಾಹಿತಿ ಬಂದ 24 ಗಂಟೆಗಳ ಒಳಗಾಗಿ ಹೆಸ್ಕಾಂನವರೇ ಉಚಿತವಾಗಿ ಟಿಸಿ ಬದಲಿಸಿ ಬೇರೆ ಟಿಸಿ ಕೊಡಬೇಕು. ಆದರೆ ರೈತರಿಂದ ಹಣ ವಸೂಲಿ ಮಾಡಿ ಟಿಸಿ ಕೊಡುವ ಅಲಿಖಿತ ಪದ್ದತಿ ರೂಢಿಸಿಕೊಂಡಿದ್ದಾರೆ. ಹೀಗಾಗಿ ಹೆಸ್ಕಾಂನಿಂದ ನಿರಂತರವಾಗಿ ರೈತರಿಗೆ ಶೋಷಣೆ ಆಗುತ್ತಿದೆ. ಈ ಕುರಿತು ಆಯಾ ಭಾಗದ ಶಾಸಕರು, ಸಚಿವರು ಗಂಭೀರವಾಗಿ ಪರಿಗಣಿಸಿ, ಭ್ರಷ್ಟ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.-ಅರವಿಂದ ಕುಲಕರ್ಣಿ, ರೈತ ಮುಖಂಡ
-----------------------------ಸಾಮಾನ್ಯವಾಗಿ ಈ ಸಮಯದಲ್ಲಿ ಮಳೆ- ಗಾಳಿಗೆ ವೈರ್‌ಗಳು ಒಂದಕ್ಕೊಂದು ತಾಗುವುದು. ವೈರ್ ಹಾಗೂ ಕಂಬಗಳ ಮೇಲೆ ಗಿಡಗಳು ಬೀಳುವುದು, ಕಂಬಗಳು ಉರುಳಿಬಿದ್ದು ಟಿಸಿಗಳು ಹಾಳಾಗುತ್ತವೆ. ರೈತರು 1912ಗೆ ಕರೆ ಮಾಡಿದಾಗ ತುರ್ತಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಸರ್ಕಾರದ ವಿವಿಧ ಒಂಭತ್ತು ನಿಗಮಗಳಲ್ಲಿನ ಫಲಾನುಭವಿಗಳಿಗೆ 100ಕ್ಕೆ 90ರಷ್ಟು ಟಿಸಿಗಳನ್ನೇ ಕೊಡಲಾಗುತ್ತಿದ್ದು, ಇದಕ್ಕೆ ರೈತರು ಹಣ ಕೊಡಬೇಕಿಲ್ಲ. ಯಾರಾದರೂ ಹಣ ಕೇಳಿದ್ದು, ಗಮನಕ್ಕೆ ಬಂದರೆ ಅಂತಹ ಸಿಬ್ಬಂದಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಸಿದ್ದಪ್ಪ ಬಿಂಜಗೇರಿ, ಹೆಸ್ಕಾಂ ಅಧೀಕ್ಷಕ ಅಭಿಯಂತರರು, ವಿಜಯಪುರ.---------------------ರೈತರಿಗೆ ಉಚಿತವಾಗಿ ಕೊಡಬೇಕಿರುವ ಟಿಸಿಗಳಿಗೆ ಹಣ ಪಡೆಯುತ್ತಿರುವುದು, ಕೆಟ್ಟುಹೋದ ಟಿಸಿಗಳನ್ನು ಉಚಿತವಾಗಿ ಬದಲಿಸಿ ಕೊಡುವಾಗ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ರೈತರ ಬಳಿ ಹಣ ವಸೂಲಿ ಮುಂದುವರೆಸಿದರೆ ಅಂತಹ ಸಿಬ್ಬಂದಿ, ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ.
-ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವರು.