ಸಂವಿಧಾನ ಉಳಿದರೆ ರಾಜ್ಯ, ರಾಷ್ಟ್ರ ಆಳಲು ಸಾಧ್ಯ: ಜಕ್ಕಪ್ಪ

| Published : Jan 10 2025, 12:45 AM IST / Updated: Jan 10 2025, 12:46 AM IST

ಸಾರಾಂಶ

ಚಿಕ್ಕಮಗಳೂರು, ಸಂವಿಧಾನ ನಮ್ಮ ಬದುಕು, ಭಾರತದ ಸಂವಿಧಾನ ಉಳಿದರೆ ಮಾತ್ರ ನಾವುಗಳು ರಾಜ್ಯ, ರಾಷ್ಟ್ರ ಆಳಲು ಸಾಧ್ಯ ಎಂದು ಎಐಸಿಸಿ ಸಹ ಸಂಚಾಲಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಂವಿಧಾನ ರಕ್ಷಕ ಅಭಿಯಾನ ಪೂರ್ವ ಭಾವಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನ ನಮ್ಮ ಬದುಕು, ಭಾರತದ ಸಂವಿಧಾನ ಉಳಿದರೆ ಮಾತ್ರ ನಾವುಗಳು ರಾಜ್ಯ, ರಾಷ್ಟ್ರ ಆಳಲು ಸಾಧ್ಯ ಎಂದು ಎಐಸಿಸಿ ಸಹ ಸಂಚಾಲಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪ ಹೇಳಿದರು.ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಂವಿಧಾನ ರಕ್ಷಕ ಅಭಿಯಾನ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ನಾವುಗಳು ರಕ್ಷಣೆ ಮಾಡದೇ ಹೋದರೆ ಯಾರು ರಕ್ಷಣೆ ಮಾಡುತ್ತಾರೆ ಪ್ರಶ್ನಿಸಿದರು.ಬಿಜೆಪಿ ನಾಯಕರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿಕೊಂಡು ಬರುತ್ತಿದ್ದು, ಅವರ ವಿರುದ್ಧ ನಾವುಗಳು ಸೆಟೆದು ನಿಲ್ಲಬೇಕೆಂದು ಕರೆ ನೀಡಿದರು.ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಏಕೆ ಬೇಕು ಎಂಬುದನ್ನು ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದು, ಹೊರಗುತ್ತಿಗೆಯಲ್ಲೂ ಸಹ ಎಸ್.ಸಿ, ಎಸ್.ಟಿ. ಜನಾಂಗವನ್ನು ಕಡೆಗಣಿಸಿ, ಆರ್‌ಎಸ್‌ಎಸ್‌ ಅವರನ್ನು ಮಾತ್ರ ಪರಿಗಣಿಸುತ್ತಿದ್ದು, ಇದನ್ನು ನಾವೆಲ್ಲರೂ ಪ್ರಶ್ನಿಸಬೇಕಾಗಿದೆ ಎಂದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಒಟ್ಟುಗೂಡಿಸಿ ಬೃಹತ್‌ ಕಾರ್ಯಾ ಗಾರ ಮಾಡಲು ಚಿಂತನೆ ಮಾಡಲಾಗಿದೆ. ಈ ಕಾರ್ಯಾಗಾರ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಏನಿದೆ ಎಂಬುದು ಬಿಜೆಪಿಗಾಗಲಿ, ಆರ್‌ಎಸ್‌ಎಸ್‌ಗಾಗಲಿ ತಿಳುವಳಿಕೆ ಇಲ್ಲ. ಸಂವಿಧಾನದ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್‌ ಚಿಂತನೆ ಮಾಡುತ್ತಿದೆ. ಕಾಂಗ್ರೆಸ್‌ ಜೈ ಭೀಮ್, ಜೈ ಸಂವಿಧಾನ, ಜೈ ಬಾಪು ಅವರು ಬಗ್ಗೆ ಚಿಂತನೆ ಮಾಡಿಕೊಂಡು ಬರುತ್ತಿದೆ ಎಂದರು.ಭಾರತದ ಸಂವಿಧಾನದ ಆಶಯವೇನು, ಉದ್ದೇಶವೇನು ಎಂಬುದನ್ನು ದೇಶದ ಪ್ರತಿಯೊಬ್ಬ ನಾಗರಿಕನು ಚಿಂತನೆ ಮಾಡ ಬೇಕಾಗಿದೆ. ಯುವ ಸಮೂಹಕ್ಕೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಅಂಶುಮಂತ್‌ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂವಿಧಾನದಡಿ ಕೆಲಸ ಮಾಡುತ್ತಿದೆ. ಅಂಬೇಡ್ಕರ್‌ ಹಾಕಿಕೊಟ್ಟಿರುವ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕಾಗಿದೆ. ಬದುಕು-ಹೋರಾಟ ಅವರ ಪ್ರೇರಣೆಯಾಗಿದೆ ಎಂದು ಹೇಳಿದರು.

ದೇಶದಲ್ಲಿ ಸಾಮಾನ್ಯ ಜನರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಸಮನಾಗಿ ಅಧಿಕಾರ ಹಿಡಿಯಲು ಸಂವಿಧಾನ ಕಾರಣ. ಅವರ ತ್ಯಾಗ ಬಲಿದಾನದಿಂದ ಇಂದು ನಾವುಗಳು ಸ್ವತಂತ್ರವಾಗಿ ಸಮಾಜದಲ್ಲಿ ಬಹುಕಲು ಸಹಕಾರಿ ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ್, ಕೆಪಿಸಿಸಿ ಎಸ್.ಸಿ ಘಟಕ ರಾಜ್ಯ ಉಪಾಧ್ಯಕ್ಷ ಮುನಿರಾಜು, ಸಿಡಿಎ ಅಧ್ಯಕ್ಷ ಮಹಮದ್ ನಯಾಜ್, ನಗರ ಕಾಂಗ್ರೆಸ್‌ ಅಧ್ಯಕ್ಷ ತನೋಜ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಕೆಪಿಸಿಸಿ ಎಸ್.ಸಿ. ಘಟಕದ ರಾಜ್ಯ ಸಂಚಾಲಕಿ ನೇತ್ರಾವತಿ, ಗ್ಯಾರಂಟಿ ಸಮಿತಿ ಸದಸ್ಯ ಅನ್ಸರ್ ಆಲಿ, ಮುಖಂಡರಾದ ನಾಗೇಶ್, ಶಿವಾಜಿ, ಶಬುದ್ದೀನ್ ಉಪಸ್ಥಿತರಿದ್ದರು. 9 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಂವಿಧಾನ ರಕ್ಷಕ ಅಭಿಯಾನದ ಪೂರ್ವ ಭಾವಿ ಸಭೆಯಲ್ಲಿ ಜಕ್ಕಪ್ಪ ಮಾತನಾಡಿದರು. ಬಿ.ಎಂ. ಸಂದೀಪ್‌, ಅಂಶುಮಂತ್‌, ಬಿ.ಬಿ. ನಿಂಗಯ್ಯ, ಮಂಜೇಗೌಡ ಇದ್ದರು.