ಸಾರಾಂಶ
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ । 2024ರಲ್ಲಿ 63 ಮಂಕಿ ಪಾಕ್ಸ್ ಪ್ರಕರಣ ಪತ್ತೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಪ್ರಸಕ್ತ ಸಾಲಿನಲ್ಲಿ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಆದರೆ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ಈ ನಾಲ್ಕು ತಾಲೂಕುಗಳಲ್ಲಿ ಇಲಾಖೆಯಿಂದ ಡೇಪಾ ತೈಲ ನೀಡಲಾಗಿದೆ. ಮಲೆನಾಡಿನ ಭಾಗದಲ್ಲಿ ಜನರು ಕಾಡಿಗೆ ಹೋಗುವ ವೇಳೆ ಉಣ್ಣೆಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರು ಕಾಡಿಗೆ ಹೋಗುವ ಮುನ್ನ ಇದನ್ನು ಕೈ ಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಪಶುಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಉಣ್ಣೆಯಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದ ಅವರು ಎಲ್ಲ ಪಂಚಾಯಿತಿಗಳಲ್ಲಿ ಕೆಎಫ್‌ಡಿ ಕುರಿತು ಪೋಸ್ಟರ್, ಮಾಹಿತಿ, ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು ಎಂದರು.ಡಿಎಸ್ಒ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಕಾಡಿನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಂಗನ ಕಾಯಿಲೆ ಬರುತ್ತದೆ. ಹಾಗೂ ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಲಕ್ಷಣವಾಗಿದೆ. ಆದ್ದರಿಂದ ಮಂಗ ಸತ್ತಿರುವುದು ಕಂಡ ಬಂದರೆ ಆರೋಗ್ಯ ಇಲಾಖೆ ಅಥವಾ ಸ್ಥಳೀಯ ಗ್ರಾಪಂ ಅರಣ್ಯ ಇಲಾಖೆಗೆ ತಿಳಿಸಬೇಕು. ಆ ಪ್ರದೇಶಕ್ಕೆ ಸಾರ್ವಜನಿಕರು ಹೋಗಬಾರದು ಎಂದು ತಿಳಿಸಿದರು.
ಇಲಾಖೆಯ ವತಿಯಿಂದ ನೀಡಲಾಗುವ ಡೇಪಾ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಮಂಗನ ಕಾಯಿಲೆ ಲಕ್ಷಣಗಳಾದ ಜ್ವರ, ವಿಪರೀತ ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಯಕ್ತಿ, ಇತರೆ ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದರು.2024 ರಲ್ಲಿ ಮಂಗನ ಕಾಯಿಲೆ 12,215 ಪರೀಕ್ಷೆ ನಡೆಸಲಾಗಿದ್ದು 63 ಪಾಸಿಟಿವ್ ಪ್ರಕರಣ ದಾಖಲಾಗಿ, 1 ಸಾವು ಸಂಭವಿಸಿತ್ತು. ಪ್ರಸಕ್ತ ಸಾಲಿನಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ 2024 ರಲ್ಲಿ 26950 ನಾಯಿಕಡಿತ ಪ್ರಕರಣಗಳಿದ್ದು, 4 ಸಾವು ಸಂಭವಿಸಿದೆ. ನಾಯಿ ಇತರೆ ಸಾಕು ಪ್ರಾಣಿ ಕಡಿತದ ತಕ್ಷಣ ಆಸ್ಪತ್ರೆಗೆ ತೆರಳಿ ಆಂಟಿ ರೇಬಿಸ್ ಲಸಿಕೆ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ಷಯ, ಎಚ್‌ಐವಿ ನಿಯಂತ್ರಣಾಧಿಕಾರಿ ಡಾ. ಬಿ.ಪಿ.ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 200 ಎಚ್‌ಐವಿ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 196 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು.ಡಬ್ಲ್ಯುಎಚ್‌ಓ ಕನ್ಸಲೆಂಟ್ ಡಾ.ಹರ್ಷಿತ್, ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ, ಜಿಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿಎಚ್‌ಒ ಡಾ.ನಟರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್, ವಿವಿಧ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಸಾರ್ವತ್ರಿಕ ಲಸಿಕಾಕರಣದಲ್ಲಿ ಶೇ.100 ಗುರಿ ಸಾಧಿಸಬೇಕು. ಎಂಆರ್1 ಮತ್ತು 2 ಡೋಸ್ ಲಸಿಕೆ ಬಿಟ್ಟು ಹೋದ ಮಕ್ಕಳಿಗೆ ತಕ್ಷಣ ಲಸಿಕೆ ನೀಡಬೇಕು. ಲಸಿಕೆ ಬಿಟ್ಟು ಹೋದವರನ್ನು ಗುರುತಿಸಲು ನಗರ ಪ್ರದೇಶದಲ್ಲಿ ಸರ್ವೇ ಕೈಗೊಳ್ಳಬೇಕು. ತಾಲೂಕುವಾರು ವಲಸಿಗರ ಮಾಹಿತಿ ಪಡೆದು ಅವರಿಗೂ ಲಸಿಕೆ ಹಾಕಬೇಕು.ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ.