ಸಾರಾಂಶ
ಶಶಿಕಾಂತ ಮೆಂಡೆಗಾರಕನ್ನಡಪ್ರಭ ವಾರ್ತೆ ವಿಜಯಪುರ: ಒಬ್ಬರು ತಂದೆಯಿಲ್ಲದ ತಬ್ಬಲಿ, ಇನ್ನೊಬ್ಬರ ತಂದೆ ಕುರಿ ಕಾಯ್ತಾರೆ, ಮತ್ತೊಬ್ಬರ ತಂದೆ ಆಟೊಚಾಲಕ, ಮತ್ತೋರ್ವಳು ರೈತನ ಮಗಳು.. ಹೀಗೆ ಇವರ ಬಗ್ಗೆ ಹೇಳುತ್ತಿದ್ದರೆ ಪದಗಳುಇ ಸಾಲೋದಿಲ್ಲ. ಯಾಕೆಂದರೆ ಸಾಕಷ್ಟು ಸಂಕಷ್ಟಗಳ ಮಧ್ಯೆಯೂ ಚಿನ್ನದ ಪದಕಗಳನ್ನು ಬೇಟೆಯಾಡುವ ಮೂಲಕ ಸಾಧನೆಗೈದಿದ್ದಾರೆ. ಈ ಬಾರಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ 16ನೇ ಘಟಿಕೋತ್ಸವದಲ್ಲಿ ಮೂವರು ತಲಾ ಮೂರು ಚಿನ್ನದ ಪದಕಗಳನ್ನು ಪಡೆದು ಮಾದರಿಯಾಗಿದ್ದಾರೆ.ಗುರಿಯಾಗಿ ಮಗಳ ಚಿನ್ನದ ಬೇಟೆ:ಎಂಎ ಕನ್ನಡ ಪದವಿಯಲ್ಲಿ 2000ಕ್ಕೆ 1661 ಅಂಕ ಪಡೆಯುವ ಮೂಲಕ ಅತಿಹೆಚ್ಚು ಅಂಕ ಪಡೆದು ಕನ್ನಡ ಪದವಿಯಲ್ಲಿ ವಿವಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ ಮಂದಿರಾ ತೆಳಗಡೆ. ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ನಿವಾಸಿ ಮಂದಿರಾ ತಂದೆ ಹನುಮಂತ ಕುರಿ ಕಾಯುತ್ತಾರೆ, ತಾಯಿ ರೇಣುಕಾ ಕೂಲಿ ಕೆಲಸ ಮಾಡುತ್ತಾರೆ. ನಾಲ್ಕು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿರುವ ಇವರದ್ದು ಕಡು ಬಡತನದ ಕುಟುಂಬ. ಅದರಲ್ಲಿ ಮೂರನೇಯವರಾಗಿರುವ ಇಂದಿರಾ ಮುಧೋಳ ತಾಲೂಕಿನ ಮಿರ್ಜಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು, ಬಳಿಕ ಪಿಯುಸಿಯನ್ನು ಹಳಿಂಗಳಿಯ ಖಾಸಗಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಳಿಕ ಬನಹಟ್ಟಿಯ ಎಸ್‌ಟಿಸಿ ಕಾಲೇಜಿನಲ್ಲಿ ಪದವಿ ಮುಗಿಸಿದರು. ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಎ ಕನ್ನಡ ಓದು ಮುಗಿಸಿ, ಇದೀಗ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.ಕೆಲಸ ಮಾಡುತ್ತ ಓದು:ಎಂಎ ಹಿಂದಿ ಪದವಿಯಲ್ಲಿ ಅತಿಹೆಚ್ಚು ಅಂಕ ಪಡೆದು ಎರಡು ಚಿನ್ನದ ಪದಕ ಹಾಗೂ ಸ್ತ್ರೀವಾದಿ ನ್ಯಾಯಶಾಸ್ತ್ರ ಪತ್ರಿಕೆಯಲ್ಲಿ ಹೆಚ್ಚು ಅಂಕ ಪಡೆದು ಒಂದು ಚಿನ್ನದ ಪದಕ ಸೇರಿ ಒಟ್ಟು ಮೂರು ಚಿನ್ನದ ಪದಕ ಪಡೆದಿರುವ ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ಅಫರೀನ್ ಶಿಲೇದಾರ ಸ್ವಾಭಿಮಾನಿಯಾಗಿದ್ದಾಳೆ. ಮೂರು ವರ್ಷದವಳಿದ್ದಾಗಲೇ ತಂದೆ ರಂಜಾನ್ ತೀರಿಕೊಂಡಿದ್ದು, ಮೂವರು ಮಕ್ಕಳನ್ನು ಹೊಂದಿರುವ ತಾಯಿ ಅಮೀನಾ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. 2ನೇ ಮಗಳಾದ ಅಫರೀನ್ ಬ್ಯೂಟಿ ಪಾರ್ಲರ್ ಕೆಲಸ ಮಾಡಿಕೊಂಡು ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲೇ ಓದಿರುವ ಇವರು ಸ್ವಂತ ದುಡಿಮೆಯ ಮೇಲೆ ಶಿಕ್ಷಣ ಪಡೆಯುವ ಮೂಲಕ ಮಹಿಳಾ ವಿದ್ಯಾರ್ಥಿನಿಯರಿಗೆ ಮಾದರಿ.ಆಟೋ ಚಾಲಕನಿಗೆ ಚಿನ್ನದ ಮಗಳುಬೆಂಗಳೂರಿನಲ್ಲಿ ಬಾಡಿಗೆ ಆಟೋ ಓಡಿಸುವ ಪ್ರಮೋದ ಸಾವಂತ ಎಂಬುವರ ಪುತ್ರಿ ವನಿತಾ ಸಾವಂತ ಎಂಎಸ್ಸಿ ಅಹಾರ ಸಂರಕ್ಷಣೆ ಮತ್ತು ಪೋಷಕಾಂಶ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾಳೆ. ತಂದೆ ಪ್ರಮೋದ ಆಟೋ ಚಾಲಕರಾಗಿದ್ದು, ತಾಯಿ ಸುರೇಖಾ ಗೃಹಿಣಿ. ಉತ್ತಮ ಅಹಾರ ಸಿಗದ ಹಿನ್ನೆಲೆ ಫುಡ್ ಪ್ರೊಸೆಸಿಂಗ್ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಮೆಡಿಸಿನ್ ಇಲ್ಲದೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಎಚ್ಚರಿಸುವ ಪಣ ತೊಟ್ಟಿದ್ದಾರೆ.ರೈತನ ಮಗಳಿಗೆ ಮೂರು ಚಿನ್ನತಿಕೋಟಾ ತಾಲೂಕಿನ ಕಳ್ಳಕವಟಗಿ ರೈತ ವಿಠ್ಠಲ ತಾಯಿ ಮಹಾದೇವಿ ಪುತ್ರಿ ಸೌಜನ್ಯ ಜುಂಜರವಾಡ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಕಳ್ಳಕವಟಗಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ವಿಜಯಪುರದಲ್ಲಿರುವ ಸೋದರಮಾವ ಬಸವರಾಜ ಬಬಲಾದ ಅವರ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಮುಗಿಸಿದ್ದಾರೆ. ಪ್ರಸ್ತುತವಾಗಿ ಸೌಜನ್ಯ ಬೆಂಗಳೂರಿನ ವೈಎಂಸಿಎ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೈಹಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರು, ಅಂತರ ವಿವಿಯಲ್ಲಿ ಮಹಾವಿದ್ಯಾಲಯದಲ್ಲಿ ಏಳುಬಾರಿ ಯುನಿವರ್ಸಿಟಿ ಬ್ಲೂ ಆಗಿದ್ದಾರೆ. ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ರಾಷ್ಟ್ರಮಟ್ಟದ ವಿಜೇತೆಯೂ ಆಗಿದ್ದಾಳೆ.ಇವರೆಲ್ಲರಂತೆ ಸಾಧಿಸಬೇಕು ಎಂಬ ಪಣತೊಟ್ಟಿದ್ದ ಶಿಲ್ಪಾ ಪಡೆಪ್ಪಗೋಳ ಎಂಎ ಸಮಾಜಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದು, ಪಲ್ಲವಿ ಯರನಾಳ ಅವರು ಎಂಎ ಅರ್ಥಶಾಸ್ತ್ರ ಪದವಿಯಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸಾಧನೆ ಮಾಡಲೇಬೇಕು ಎಂದು ನಿರ್ಧರಿಸಿದರೆ ಯಾವ ಕೊರತೆಯೂ ಸಹ ಕಾರಣವಾಗೋದಿಲ್ಲ. ದಿಟ್ಟ ಮನಸ್ಸಿನ ನಿರ್ಧಾರ ಹಾಗೂ ನಿರಂತರ ಶ್ರಮ ತಕ್ಕ ಪ್ರತಿಫಲವನ್ನೇ ನೀಡುತ್ತದೆ ಎಂಬುವುದಕ್ಕೆ ಈ ವಿದ್ಯಾರ್ಥಿನಿಯರೇ ಸಾಕ್ಷಿಯಾಗಿದ್ದಾರೆ. ಈ ವಿದ್ಯಾರ್ಥಿನಿಯರೆಲ್ಲ ಮುಂದಿನ ದಿನಗಳಲ್ಲಿ ಪಿಹೆಚ್‌ಡಿ ಮಾಡುವುದು, ಉಪನ್ಯಾಸಕರಾಗೋದು ಹಾಗೂ ಸರ್ಕಾರಿ ಸೇವೆ ಸಲ್ಲಿಸುವ ಗುರಿಗಳನ್ನು ಹೊಂದಿದ್ದಾರೆ. ತಮ್ಮ ಸಾಧನೆಯನ್ನೇ ಕೊಡುಗೆಯಾಗಿ ನೀಡಿ ತಮ್ಮ ಓದಿಗೆ ಸಹಕರಿಸಿದವರಿಗೆಲ್ಲ ಋಣ ತೀರಿಸುವ ಅಭಿಲಾಷೆ ಹೊಂದಿದ್ದಾರೆ. ಈ ಮೂಲಕ ತಮ್ಮ ಜ್ಯೂನಿಯರ್ ವಿದ್ಯಾರ್ಥಿನಿಯರಿಗೆಲ್ಲ ಮಾದರಿಯಾಗಿದ್ದಾರೆ.