ನಮ್ಮನಮ್ಮಲ್ಲಿನ ಹತ್ತಾರು ವೈರುಧ್ಯಗಳನ್ನು ಮೆಟ್ಟಿ ನಿಂತು ನಾವೆಲ್ಲರೂ ಒಂದು ಎಂಬ ಮನೋಭಾವನೆ ಹೊಂದಿ ಒಗಟ್ಟಿನಿಂದ ಬದುಕಿದರೆ ಎಂಥದೇ ಪ್ರತಿರೋಧಕ ಶಕ್ತಿಯನ್ನು ಹಿಮ್ಮೆಟ್ಟಿಸಿ ವಿಶ್ವದಲ್ಲಿ ಭಾರತಾಂಬೆಯ ಶ್ರೇಷ್ಠತೆ ಮೆರೆಸಲು ಸಾಧ್ಯವೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ನಮ್ಮನಮ್ಮಲ್ಲಿನ ಹತ್ತಾರು ವೈರುಧ್ಯಗಳನ್ನು ಮೆಟ್ಟಿ ನಿಂತು ನಾವೆಲ್ಲರೂ ಒಂದು ಎಂಬ ಮನೋಭಾವನೆ ಹೊಂದಿ ಒಗಟ್ಟಿನಿಂದ ಬದುಕಿದರೆ ಎಂಥದೇ ಪ್ರತಿರೋಧಕ ಶಕ್ತಿಯನ್ನು ಹಿಮ್ಮೆಟ್ಟಿಸಿ ವಿಶ್ವದಲ್ಲಿ ಭಾರತಾಂಬೆಯ ಶ್ರೇಷ್ಠತೆ ಮೆರೆಸಲು ಸಾಧ್ಯವೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.ಪಟ್ಟಣದ ಮಹಾತ್ಮಗಾಂಧೀ ಕ್ರೀಡಾಂಗಣದ ಅಲ್ಲಮಪ್ರಭು ವೇದಿಕೆಯಲ್ಲಿ ಮಂಗಳವಾರ ಬೃಹತ್ ಹಿಂದೂ ಸಮ್ಮೇಳನ ಉದ್ದೇದ್ದೇಶಿಸಿ ಮಾತನಾಡಿದ ಅವರು, ಇದೀಗ ಭಾರತ ಹಿಂದಿನಂತಿಲ್ಲ, ಹೊಸ ನಾಯಕತ್ವದೊಡನೆ, ಹೊಸ ಚಿಂತನೆಗಳಿಂದ ಕೂಡಿದ ಹತ್ತಾರು ಹೊಸತನದ ಭಾಷ್ಯ ಬರೆಯುವ ಮೂಲಕ ವಿಶ್ವದ ಚಿತ್ತ ನಮ್ಮತ್ತ ಸೆಳೆದಿದೆ. ಎಂತಹುದೇ ಬಾಹ್ಯಶಕ್ತಿಯ ತಾಳಕ್ಕೆ ಕುಣಿಯದೆ ದೇಶದ ಹಿತಾಸಕ್ತಿಗೆ ಒತ್ತು ನೀಡಿ ಹೊಸ ಮನ್ವಂತರ ಸೃಜಿಸುವ ಮೂಲಕ ದಿಟ್ಟ ನಿಲುವು ಹೊಂದಿದೆ. ದೇಶದ ಬಾಹ್ಯ ರಕ್ಷಣೆಗೆ ನಮ್ಮ ಸೈನಿಕರು ಅಹರ್ನಿಶಿ ಮೈಯೆಲ್ಲ ಕಣ್ಣಾಗಿದ್ದಾರೆ. ಆದರೆ ಆಂತರಿಕ ಶತ್ರುಗಳನ್ನು ತಡೆಯುವತ್ತ ದೇಶವಾಸಿಗಳೆಲ್ಲರೂ ಸೈನಿಕರಂತೆ ಶ್ರಮಿಸಬೇಕಿದೆ. ಒಳಗಿನ ಕಸ ತೆಗೆದರೆ ಹೊರಗಿನ ಕಸ ನಮ್ಮತ್ತ ಬಾರದು. ದೇಶಪ್ರೇಮಿ ಸಂಶಯದಿಂದ ನೋಡುವ ಕಾಲ ಹೋಗಿದೆ. ಸೋಗಿನ ಮುಖವಾಡಗಳನ್ನು ಕಳಚಿ ನಮ್ಮ ದೇಶದ ಸಾರ್ವಭೌಮತೆ, ಸಂರಕ್ಷಣೆ ಮಾಡುವ ಗುರುತರ ಹೊಣೆ ನಾವೆಲ್ಲರೂ ಒಂದಾಗಿ ಎದುರಿಸಿ ಗೆಲ್ಲಬೇಕಿದೆ. ಮೂಲತ್ವ ಮರೆತರೆ ನಮ್ಮತನದ ದುರ್ಗತಿ ಬಗ್ಗೆ ಪೌರಾತ್ಯ ರಾಷ್ಟ್ರಗಳಾದ ಇಂಗ್ಲೆಂಡ್, ಕೆನಡಾ ನಮಗೆ ನಿದರ್ಶನವಾಗಿವೆ. ಸಂಸ್ಕೃತಿ ನಮ್ಮ ಮೂಲ ಬೇರು ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಗಾರಿಕೆ ನಾವೆಲ್ಲ ನಿರ್ವಹಿಸಬೇಕೆಂದರು.
ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಮಾತನಾಡಿ, ಯಾವುದೇ ವ್ಯಕ್ತಿ, ದೇಶ ತನ್ನ ಮೂಲತ್ವ ಕಳೆದುಕೊಂಡಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ. ಸಮರಗಳಲ್ಲೂ ನಿಯಮ ಪಾಲಿಸುವ, ರಕ್ಷಣೆ ಕೋರಿ ಬಂದ ವೈರಿಗೂ ಅಭಯ ನೀಡುವ ನಮ್ಮ ಸಂಸ್ಕೃತಿ ಜಗತ್ತಿನ ಯಾವುದೆ ದೇಶದಲ್ಲಿಲ್ಲ. ಪರಕೀಯರ ವಿಜೃಂಭಣೆಯನ್ನೇ ನಮ್ಮ ಇತಿಹಾಸದಲ್ಲಿ ಓದಿ ನಮ್ಮ ಮೂಲತ್ವದ ಸತ್ಯ ಮರೆಯಾಗಿತ್ತು. ಇದೀಗ ಕಟು ಸತ್ಯ ಅನಾವರಣಗೊಂಡು ನಿಜವಾದ ದೇಶದ್ರೋಹಿಗಳು ಮತ್ತು ಡೋಂಗಿ ನಾಯಕರ ಬಣ್ಣ ಬಯಲಾಗುತ್ತಿದೆ ಎಂಬುವುದಕ್ಕೆ ಧರ್ಮಾಧಾರಿತ ದೇಶಗಳಲ್ಲಿ ಹಿಂದೂ ಕುರುಹಿನ ದೇಗುಲಗಳು ಪತ್ತೆಯಾಗುತ್ತಿರುವುದು ಅಖಂಡ ಭಾರತದ ನೈಜತೆ ತೇಜಸ್ಸಿನಿಂದ ಕಂಗೊಳಿಸುತ್ತಿದೆ. ದೇಶದಲ್ಲಿ ಆಂತರಿಕ ಸಂಚು ಬೆಳೆಸಲು ಪಟ್ಟಭದ್ರರು ಹೊಂಚು ಹಾಕಿದ್ದು, ನಿರಾಶ್ರಿತರ ಸೋಗಿನಲ್ಲಿ ಬಂದವರಿಗೆ ಸಕಲ ಸೌಕರ್ಯ ಕಲ್ಪಿಸುವ ಮೂಲಕ ವಿದ್ರೋಹಿಗಳು ಅಧಿಕಾರ ಲಾಲಸೆಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಪ್ರತಿ ಭಾರತೀಯ ಜಾಗೃತಗೊಂಡು ಅಕ್ರಮ ವಲಸಿಗರ ಹೊರದಬ್ಬಲು ಸಂಕಲ್ಪಿತರಾಗಬೇಕು. ಆಂತರಿಕ ಪ್ರಕ್ಷೋಭಕ್ಕೆ ಮುಂದಾಗುವ ವಿದ್ರೋಹಿಗಳನ್ನು ಸಂಘಟಿತರಾಗಿ ಮಟ್ಟಹಾಕಬೇಕಿದೆಯೆಂದರು. ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಗಂಗಾಧರ ದೇವರು, ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಡಾ.ಪುಷ್ಪದಂತ ದಾನಿಗೊಂಡ ವೇದಿಕೆಯಲ್ಲಿದ್ದರು.ಜಿನ್ನಪ್ಪ ಸವದತ್ತಿ, ಪ್ರವೀಣ ನಾಡಗೌಡ, ಬಸವರಾಜ ಬಾಳಿಕಾಯಿ, ವಿದ್ಯಾಧರ ಸವದಿ, ಮಹಾವೀರ ಕೊಕಟನೂರ, ರಮೇಶ ಪಟ್ಟಣಶೆಟ್ಟಿ, ಬಸವರಾಜ ಪಟ್ಟಣಶೆಟ್ಟಿ, ಸಿದ್ದು ಅಮ್ಮಣಗಿ, ವರ್ಧಮಾನ ಕಲ್ಲಟ್ಟಿ, ಸಂತೋಷ ಪಟ್ಟಣಶೆಟ್ಟಿ, ಸುರೇಶ ಮರಡಿ, ಗಿರೀಶ ಬಿಜ್ಜರಗಿ, ಮುರಗೇಶ ಮಿರ್ಜಿ, ಶ್ರೀನಾಥ ಸೊಟ್ಟಿ, ಅಪ್ಪು ಮಂಗಸೂಳಿ, ಪುಷ್ಪಲತಾ ಬಂಕಾಪುರ ಸಂಯೋಜನೆಯಡಿ ಸಹಸ್ರಾರು ಜನರಿದ್ದರು.