ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಸರ್ಕಾರಿ ಮಹಿಳೆಯರ ಯಶೋಭಿವೃದ್ಧಿಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಸರ್ಕಾರಿ ಮಹಿಳೆಯರ ಯಶೋಭಿವೃದ್ಧಿಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದರು.ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜ.12 ರಂದು ಬೀದರದಿಂದ ಅಭಿಯಾನ ಆರಂಭಿಸಿದ್ದೇವೆ. ಪ್ರತಿ ಜಿಲ್ಲೆಗಳಿಗೂ ತೆರಳಿ ಸಭೆಗಳನ್ನು ನಡೆಸಿ, ಸರ್ಕಾರಿ ಮಹಿಳಾ ನೌಕರರನ್ನು ಸಂಘಟಿತರನ್ನಾಗಿ ಮಾಡಿ, ಜಾಗೃತಿಗೊಳಿಸಲಿದ್ದೇವೆ. ಕೊನೆಗೆ ಫೆ.12 ರಂದು ಚಾಮರಾಜನಗರದಲ್ಲಿ ನಮ್ಮ ಪ್ರವಾಸ ಹಾಗೂ ಸದಸ್ಯತ್ವ ಅಭಿಯಾನ ಸಮಾರೋಪಗೊಳಿಸಲಿದ್ದೇವೆ ಎಂದರು.ನಮ್ಮ ಸಂಘಟನೆಯಲ್ಲಿ ಡಿ ದರ್ಜೆಯಿಂದ ಎ ದರ್ಜೆಗೂ ಮಹಿಳಾ ನೌಕರರು ಸದಸ್ಯತ್ವ ಪಡೆದಿದ್ದಾರೆ. ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಶ್ರಮಿಸುತ್ತಿದೆ ಎಂದರು.ರಾಜ್ಯ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಬೇಕು. ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿ ಮಾಡಬೇಕು. ಮಾತೃತ್ವ ರಜೆ ಒಂದು ವರ್ಷದವರೆಗೆ ವಿಸ್ತರಿಸಬೇಕು. ಗರ್ಭಿಣಿ ಸರ್ಕಾರಿ ಮಹಿಳಾ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಮತ್ತು ಸೆ.13ರಂದು ಸರ್ಕಾರಿ ಮಹಿಳಾ ನೌಕರರ ದಿನ ಎಂದು ಘೋಷಿಸಬೇಕು. ವಿದೇಶಿ ಪ್ರವಾಸಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ರಜೆ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ರಾಜ್ಯ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ, ಬೆಳಗಾವಿ ಜಿಲ್ಲಾಧ್ಯಕ್ಷೆ ರೇಖಾ ಅಂಗಡಿ, ಕಾರ್ಯದರ್ಶಿ ಎಂ. ಆಷಾರಾಣಿ, ಜಯಶ್ರೀ ಪಾಟೀಲ, ಸೇರಿದಂತೆ ಇತರರು ಉಪಸ್ಥಿತರಿದ್ದರು.