ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಭಕ್ತ ಕನಕದಾಸರ ಜೀವನ, ತತ್ವ, ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಂಡು ಶಿಕ್ಷಣ ಪಡೆದಾಗ ಸಾರ್ಥಕತೆ ಹೊಂದಲು ಸಾಧ್ಯ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಮಾಜದಲ್ಲಿನ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ವರೂ ಒಂದೇ ಎನ್ನುವ ಮೂಲಕ ಕಿತ್ತೂರ ರಾಣಿ ಚನ್ನಮ್ಮ, ಏಸು ಕ್ರಿಸ್ತ್‌ರು, ಸಜ್ಜಲಗುಡ್ಡ ಶರಣಮ್ಮನವರ, ಅಂಬೇಡ್ಕರ ಸೇರಿದಂತೆ ಹಲವಾರು ಮಹನೀಯರ ಆದರ್ಶಗಳನ್ನು ಇಂದಿನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು, ಈ ಮೂಲಕ ವಿದ್ಯಾವಂತರಾಗಿ ದೇಶದ ಕೀರ್ತಿ ಹೆಚ್ಚಿಸಬೇಕಿದೆ ಎಂದರು.
ನಿಶ್ಚಿಂತೆಯಿಂದ ಬದುಕಿ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಕನಕದಾಸರು. ಕೀರ್ತನೆಗಳ ಮೂಲಕ ಸಾಮಾಜಿಕ ಪಿಡುಗಾದ ಜಾತಿ ಪದ್ಧತಿಯನ್ನು ವಿರೋಧಿಸಿದವರು. ಸಾಮಾಜಿಕ ಕಟ್ಟುಪಾಡುಗಳ ಹಿನ್ನಲೆಯಲ್ಲಿ ಮತ್ತು ಸದಾ ಕಾಲ ಒತ್ತಡದಲ್ಲಿ ಬದುಕು ನಡೆಸುತ್ತಿರುವ ಇಂದಿನ ಜನ ಸಮುದಾಯದ ದೃಷ್ಟಿಯಿಂದ ಗಮನಿಸಿದಾಗಲೂ ಕನಕದಾಸರ ಕೀರ್ತನೆಗಳು ತೀರಾ ಅವಶ್ಯವೇ ಮುಖ್ಯವಾಗಿ ಉತ್ತಮ ಸಂದೇಶ ನೀಡುತ್ತವೆ. ಕೀರ್ತಿನೆಯ ಕಾವ್ಯಮಯಲ್ಲಿ ಡಾಂಭಿಕ ಭಕ್ತರ ನಿಜ ಸ್ವರೂಪವನ್ನು ಬಿಚ್ಚಿ ಗುರು, ಅರಿವು, ಭಕ್ತಿ ಹಾಗೂ ಜೀವನದ ಬಗ್ಗೆ ಜಗತ್ತಿಗೆ ಸಾರಿ ಹೇಳಿದವರು ಕನಕದಾಸರು ಎಂದು ವಿವರಿಸಿದರು.ದಾಸ ಪರಂಪರೆ ಅಗ್ರಗಣ್ಯರಲ್ಲಿ ಕನಕದಾಸರು ಒಬ್ಬರು. 16ನೇ ಶತಮಾನದಲ್ಲಿಯೇ ಸಮಾಜಕ್ಕೆ ಅನಿಷ್ಟವಾಗಿರುವ ಜಾತಿ ವ್ಯವಸ್ಥೆಯ ವಿರುದ್ಧ ಕಹಳೆ ಮೊಳಗಿದ ಇವರು, ಕೃಷ್ಣನ ಪರಮ ಭಕ್ತ. ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಜನಿಸಿದ ಕನಕದಾಸರ ತಂದೆ ಬೀರಪ್ಪ, ತಾಯಿ ಬಚ್ಚಮ್ಮ. ಮೂಲ ಹೆಸರು ತಿಮ್ಮಪ್ಪ ನಾಯಕ. ಕುರುಬ ಜನಾಂಗದಲ್ಲಿ ಜನಿಸಿದ ಇವರು ಬಂಡಿಪುರದ ದಂಡನಾಯಕನ ವೃತ್ತಿ ನಿರ್ವಹಿಸುತ್ತಿದ್ದರು. ಯುದ್ದಯೊಂದರಲ್ಲಿ ಸೋಲು ಅನುಭವಿಸಿದ ನಂತರ ಹರಿಭಕ್ತರಾಗಿ ಕನಕದಾಸರೆಂದು ಸಮಾಜಕ್ಕೆ ಚಿರಪರಿಚಿತರಾದರು ಎಂದು ತಿಳಿಸಿದರು.
ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ ಕನಕದಾಸರು ಕಾಗಿನೆಲೆ ಆಧಿಕೇಶವನ ಭಕ್ತರು. ಉಡುಪಿಯ ಕೃಷ್ಣ ದರ್ಶನ ಸಿಗದೇ ಇರುವಾಗ ತಮ್ಮ ಭಕ್ತಿಯ ಮೂಲಕವೇ ಕೃಷ್ಣನನ್ನು ಕಿಂಡಿ ಮೂಲಕ ದರ್ಶನ ಪಡೆದವರು ಕನಕದಾಸರು. ದೇವರೇ ಒಲಿದ ಮೇಲೆ ಇನ್ನೇನಿದೆ ಈ ಜೀವಕ್ಕೆ ಎಂಬಂತೆ ಅವರಿಗೆ ದೈವ ಸಾಕ್ಷಾತ್ಕಾರವಾದ ಮೇಲೆ ಆತನೊಲಿಯದ ಮೇಲೆ ಇನ್ನಿತರ ಕುಲವಯ್ಯ ಎಂದು ಕೀರ್ತನೆಗಳ ಮೂಲಕ ಸಾಮಾಜಿಕ ಪಿಡುಗಾದ ಜಾತಿ ವ್ಯವಸ್ಥೆ ವಿರೋಧಿಸಿದರು. ಇಂತಹ ಮಹಾನ ಸಂತರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರ ಸಾಮಾಜಿಕ ಕಳಕಳಿಯ ಜವಾಬ್ದಾರಿಯನ್ನು ಎಲ್ಲ ಸಮಾಜದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗೌರವಿಸಬೇಕು ಎಂದು ಹೇಳಿದರು.ಈ ವೇಳೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಪಂ ಇಒ ಮಸಳಿ, ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬ ಇ ಕೆ ಬಿರಾದಾರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ, ರಾಯನಗೌಡ ತಾತರಡ್ಡಿ, ಕೃಷಿ ಅಧಿಕಾರಿ ಅರವಿಂದ ಹೂಗಾರ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಸಾವಳಗಿ ಸೇರಿ ಹಲವರು ಇದ್ದರು.----------