ದಾಬಸ್‍ಪೇಟೆ: ಭಾರತೀಪುರ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸಿ, ಕಾಮಗಾರಿ ಮಾಡಿದ ನಂತರ ರಂಗೋಲಿ ಸ್ಪರ್ದೆ ಮಾಡಲಿ ಎಂದು ಹೇಳಿದ್ದೇವೆಯೇ ಹೊರೆತು ಯಾರಿಗೂ ಬೆದರಿಕೆ, ಧಮ್ಕಿ ಹಾಕಿಲ್ಲ, ಶಾಸಕರ ಬಗ್ಗೆ ಅಪಾರ ಗೌರವವಿದೆ. ಆದರೆ ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಎಂದು ಸೋಂಪುರ ಜೆಡಿಎಸ್ ಹೋಬಳಿ ಅಧ್ಯಕ್ಷ ಭಾರತೀಪುರ ಮೋಹನ್ ಕುಮಾರ್ ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಶಾಸಕರ ಜೊತೆ ವಿಶ್ವಾಸವಿರುವುದು ನಿಜ, ಬಹಳ ಗೌರವವಿಂದ ಪರಸ್ಪರ ಅವರು ಮತ್ತು ನಾವು ಮಾತನಾಡಿಸುತ್ತೇವೆ. ನೀವು ಶಾಸಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ ಎಂದು ಗ್ರಾಮಸ್ಥರು ಪ್ರಶ್ನಿಸಿದ ಹಿನ್ನೆಲೆಯಲ್ಲಿ, ನಾವು ಅಭಿವೃದ್ಧಿ ಮಾಡಿದ ನಂತರ ರಂಗೋಲಿ ಸ್ಪರ್ದೆ ಮಾಡಿ ಅಂತ ರಂಗೋಲಿ ಸ್ಪರ್ಧೆಗೆ ವಿರೋಧಿಸಿದ್ದು ನಿಜ ಆದರೆ, ನಂತರ ಸಹಕಾರ ನೀಡಿದ್ದೇವೆ. ಯಾರಿಗೂ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಡಿ ಎಂದು ತಿಳಿಸಿಲ್ಲ, ಅಭಿವೃದ್ಧಿಗೂ ವಿರೋಧವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಭಾರತೀಪುರ ಕಾಲೋನಿಗೆ 50 ಲಕ್ಷ ಕಾಮಗಾರಿ ಆಗಿದೆ. ಭಾರತೀಪುರಕ್ಕೆ 1.50 ಕೋಟಿ ಕಾಮಗಾರಿ ಕೈಗೊಳ್ಳುತ್ತೇವೆ ಎಂದಿದ್ದಾರೆ. ರಸ್ತೆ ಅಭಿವೃದ್ದಿ ಮಾಡಿದ ನಂತರ ನಾವೇ ಮಂದೆ ನಿಂತು ಶಾಸಕರನ್ನು ಸನ್ಮಾನಿಸುತ್ತೇವೆ. ಈ ಹಿಂದಿನ ಶಾಸಕರಾದ ದಿ.ಸಿ.ಚನ್ನಿಗಪ್ಪ, ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ ಅಭಿವೃದ್ಧಿ ಮಾಡಿದ್ದಾರೆ, ಆದರೆ ಇದೀಗ, ಭಾರತೀಪುರ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಶೀಘ್ರವಾಗಿ ರಸ್ತೆ ಕಾಮಗಾರಿ ಮಾಡಲಿ ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಡೇಹಳ್ಳಿ ತೀರ್ಥಪ್ರಸಾದ್ ಮಾತನಾಡಿ, ನಮ್ಮ ಎಡೇಹಳ್ಳಿ ಗ್ರಾಮದಲ್ಲಿ 850 ಮತಗಳಿವೆ. ರಂಗೋಲಿ ಸ್ಪರ್ಧೆ ಪಕ್ಷಾತೀತವಾಗಿ ಮಾಡಿದರೆ ಸ್ವಾಗತಿಸುತ್ತೇನೆ. ಕಾಂಗ್ರೆಸ್ ವೇದಿಕೆಯಲ್ಲಿ ಮಾಡಿದರೆ ಜೆಡಿಎಸ್ ಪಕ್ಷದವನಾಗಿ ನಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದೇನೆ. ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಯಾರಿಗೂ ಧಮ್ಕಿ ಹಾಕಿಲ್ಲ, ನನ್ನ ವ್ಯಕ್ತಿತ್ವದ ಬಗ್ಗೆ ಕಾಂಗ್ರೆಸ್ ಮುಖಂಡರಿಂದಲೇ ಕೇಳಿ ತಿಳಿಯಿರಿ. ಇಡೀ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸದೆ ಇರುವುದಕ್ಕೆ ನಾನು ಕಾರಣನಲ್ಲ, ನಾನು ಯಾರಿಗೂ ಒತ್ತಡ ಹಾಕಿಲ್ಲ ನನ್ನ ಹೆಸರಿಗೆ ಅನಗತ್ಯ ಕಳಂಕ ತರುವುದು ಬೇಡ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಚನಹಳ್ಳಿ ಪಟ್ಟಾಭಿರಾಮಯ್ಯ ಮಾತನಾಡಿ, ನೆಲಮಂಗಲ ಕ್ಷೇತ್ರವನ್ನು 10 ವರ್ಷ ಶಾಸಕರಾಗಿ ಅಭಿವೃದ್ಧಿ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಕೆಲ ಕಾರಣಗಳಿಂದ ಪರಾಭವಗೊಂಡಿದ್ದಾರೆ. 2028ರ ವಿಧಾನಸಭಾ ಚುನಾವಣೆಗೆ ಡಾ.ಕೆ.ಶ್ರೀನಿವಾಸಮೂರ್ತಿಯವರೇ ಜೆಡಿಎಸ್‌ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೇ ಸಭೆಯಲ್ಲಿ ಮುಖಂಡರಿಗೆ ತಿಳಿಸಿದ್ದಾರೆ. ಈಗಾಗಲೇ ತಾಲೂಕಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಯಕರ್ತರ ಜೊತೆಯಲ್ಲಿದ್ದಾರೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಗಜ್ಯೋತಿ ಬಸವೇಶ್ವರ, ಶಶಿಧರ್, ನಿಡವಂದ ವಿಎಸ್ಎಸ್ಎನ್‌ಜಿ ಅಧ್ಯಕ್ಷ ಅಲ್ಪಯ್ಯನಪಾಳ್ಯ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್, ಮುಖಂಡರಾದ ಮರಿಯಪ್ಪಗೌಡ, ದೇವರಹೊಸಹಳ್ಳಿ ಸತೀಶ್, ನಿಡವಂದ ಜಗದೀಶ್, ಸಂತೋಷ್, ಕುಮಾರ್, ಹರ್ಷ ಇತರರಿದ್ದರು.

ಪೋಟೋ 1 :

ಸೋಂಪುರ ಹೋಬಳಿಯ ಎಡೇಹಳ್ಳಿಯಲ್ಲಿ ಸೋಂಪುರ ಜೆಡಿಎಸ್ ಹೋಬಳಿ ಅಧ್ಯಕ್ಷ ಭಾರತೀಪುರ ಮೋಹನ್ ಕುಮಾರ್ಪ ತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.