ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ನೆಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಚೋಳಸಂದ್ರ ಗ್ರಾಮದ ಸರ್ವೇ ನಂ 32ರಲ್ಲಿ ದಲಿತರಿಗೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ಹೊಸ ಕ್ರಷರ್ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರೂ ತಾಲೂಕು ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡು ನ್ಯಾಯ ಒದಗಿಸಿಲ್ಲ ಎಂದು ದಸಂಸ ಪ್ರೊ.ಬಿ.ಕೃಷ್ಣಪ್ಪ ಬಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಕಂಚಿನಕೋಟೆ ಮೂರ್ತಿ ಮತ್ತು ದಸಂಸ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಆರೋಪಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರಿಗೆ ಸೇರಿದ ಜಾಗದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಕ್ರಷರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ, ಪಾಡವಪುರ ಉಪ ವಿಭಾಗಾಧಿಕಾರಿ ಸೇರಿದಂತೆ ತಹಸೀಲ್ದಾರ್ ಅವರಿಗೂ ಕ್ರಮವಹಿಸುವಂತೆ ಮನವಿ ಪತ್ರ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ ಎಂದರು.

ಜಮೀನಿನ ಮಾಲೀಕರು ನ್ಯಾಯ ದೊರಕಿಸಿಕೊಡುವಂತೆ ನಮಗೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕು ದಲಿತ ಸಂಘಟನೆ ಹೋರಾಟ ನಡೆಸುತ್ತಿದೆ. ಇನ್ನು ಹತ್ತು ದಿನಗಳಲ್ಲಿ ನ್ಯಾಯಾ ಸಿಗದಿದ್ದರೇ ಪಟ್ಟಣದಲ್ಲಿ ತಮಟೆ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.

ಅಧಿಕಾರಿಗಳಿಂದ ಯಾವುದೇ ಪರವಾನಗಿ ಪಡೆಯದೆ ಅಕ್ರಮ ಕ್ರಷರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ರಷರ್ ನಿರ್ಮಾಣ ಮಾಡುತ್ತಿರುವ 2 ಎಕರೆ ಜಮೀನು ಹೊಸಮನೆ ಗ್ರಾಮದ ದಲಿತ ಮಹಿಳೆ ಸ್ನೇಹ ಅವರಿಗೆ ಸೇರಿದ್ದಾಗಿದೆ. ಈ ಜಾಗ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾಗಿದೆ. ಮಂಜೂರಾತಿ ಚೀಟಿ ಇದ್ದರೂ ಬಲಶಾಲಿಗಳು ಕ್ರಷರ್ ಮಾಡುವ ಉದ್ದೇಶದಿಂದ ದಲಿತರ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.


ಈ ಬಗ್ಗೆ ನ್ಯಾಯ ಕೇಳಿದರೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳಿಗೆ ನೀಡಿರುವ ಪತ್ರ ಹಾಗೂ ಕ್ರಷರ್ ನಿರ್ಮಾಣ ಮಾಡಲು ಪರವಾನೆಗೆಯನ್ನು ಪಂಚಾಯ್ತಿ ಹಾಗೂ ಗಣಿ ಇಲಾಖೆ ನೀಡಿಲ್ಲದಿರುವುದಕ್ಕೆ ಪತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು, ಇದರಿಂದಾಗಿ ಪರಿಸರ ಅರಣ್ಯ ಪ್ರದೇಶ ಹಾಳಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ತಾಲೂಕು ಆಡಳಿತ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರಾಜಕೀಯ ಒತ್ತಡದಿಂದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಬೆಳ್ಳೂರು ಆಟೋ ಶಿವಣ್ಣ, ಮುಖಂಡರಾದ ಚಿರಂಜೀವಿ, ಕೃಷ್ಣ, ಸ್ನೇಹ ಇದ್ದರು.