ತಾಲೂಕಿನ ಬಹುತೇಕ ಊರುಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ

ಕೂಡ್ಲಿಗಿ: ತಾಲೂಕಿನಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಯುವಕರ ಪ್ರಾಣ ಹೋಗುತ್ತಿದ್ದು, ಮದ್ಯಸೇವನೆ ಮಾಡಿ ಬೈಕ್ ಓಡಿಸುವವರೇ ಹೆಚ್ಚಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ. ತಾಲೂಕಿನ ಬಹುತೇಕ ಊರುಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿದೆ. ನೀವೇನು ಮಾಡುತ್ತಿದ್ದೀರಿ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಬಕಾರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ನಡೆದ ಇಲಾಖೆವಾರು ಪ್ರಗತಿಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಮುಖಂಡರು, ಕಾರ್ಯಕರ್ತರು, ಸ್ನೇಹಜೀವಿಗಳು ಮದ್ಯ ಸೇವಿಸಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾನು ಮೊದಲು ವೈದ್ಯ, ನಂತರ ಶಾಸಕ. ನನಗೆ ಆರೋಗ್ಯಕ್ಕೆ ಸಂಬಂಧಿಸಿ ಹಲವು ಜವಾಬ್ದಾರಿಗಳು ಇವೆ. ನೀವು ಹೆಸರೇಳಲು ಎರಡು ಕೇಸ್ ದಾಖಲು ಮಾಡಿ ನುಣುಚಿಕೊಳ್ಳುವುದು ಸರಿಯಲ್ಲ. ತಾಲೂಕಿನ ಮೂಲೆ ಮೂಲೆಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಯಂತ್ರಣ ತರಬೇಕು. ಆರ್‌ಟಿಒ ಅಧಿಕಾರಿಗಳು ಹೈವೇ ರಸ್ತೆಯಲ್ಲಿ ಜೀಪ್ ನಿಲ್ಲಿಸಿ ಲಾರಿಗಳನ್ನು ಚೆಕ್ ಮಾಡುವ ಬದಲು ದ್ವಿಚಕ್ರ ವಾಹನ ಚಾಲಕರಿಗೆ ಅಪಘಾತದ ಬಗ್ಗೆ ಅರಿವು ಮೂಡಿಸುವ ಕೆಲಸ ಮೊದಲು ಮಾಡಿ ಎಂದು ಚಾಟಿ ಬೀಸಿದರು.

ಬೈಕ್ ಸವಾರರ ಲೈಸೆನ್ಸ್ ಮುಂತಾದ ದಾಖಲೆ ಪರಿಶೀಲನೆ ಮಾಡಬೇಕು. ಹಳ್ಳಿಯ ಯುವಕರಿಗೆ ಕೂಡ್ಲಿಗಿಯಲ್ಲಿಯೇ ಚಾಲನೆ ಪರಿಶೀಲಿಸಿ ಅವರಿಗೆ ಚಾಲನಾ ಪರವಾನಿಗೆ ನೀಡಬೇಕೆಂದು ಆರ್.ಟಿ.ಓ. ಅಧಿಕಾರಿಗಿಗೆ ತಾಕೀತು ಮಾಡಿದರು.

ವಸತಿ ಶಾಲೆಗಳಲ್ಲಿ ಬಾಲಕಿಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿದ್ದರೆ ಸಹಿಸುವುದಿಲ್ಲ. ರಾಜ್ಯದಲ್ಲಿ 7, 9ನೇ ತರಗತಿ ಓದತ್ತಿರುವ ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ನಮ್ಮ ತಾಲೂಕಿನಲ್ಲಿ ಅಂತಹ ಪ್ರಕರಣಗಳು ನಡೆಯದಂತೆ ಪ್ರಾಂಶುಪಾಲರು ವಾರ್ಡನ್ ಗಳು, ನರ್ಸ್ ಗಳು ಆದ್ಯ ಕರ್ತವ್ಯದ ರೀತಿಯಲ್ಲಿ ಕಾಳಜಿ ವಹಿಸಬೇಕು. ವಸತಿ ಶಾಲೆಗೆ ಅಪರಿಚಿತರು ಯಾರು ಬರುತ್ತಾರೆ ಎಂಬುದರ ಬಗ್ಗೆ ನಿಗಾ ಇರಬೇಕು. ಪ್ರಾಂಶುಪಾಲರು, ವಾರ್ಡನ್ ತಮ್ಮ ಸಿಬ್ಬಂದಿ ವರ್ತನೆಗಳ ಬಗ್ಗೆ ಗಮನ ಇಡಬೇಕು ಎಂದರು.

ಕುರಿಗಾಹಿಗಳ ಬುದ್ಧಿವಂತಿಕೆ ಅಧಿಕಾರಿಗಳಿಗಿಲ್ಲ:

ಹಳ್ಳಿಗಳಲ್ಲಿ 400ಕ್ಕೂ ಹೆಚ್ಚು ಕುರಿಗಳ ಬಗ್ಗೆ ಒಬ್ಬ ಕುರಿಗಾಹಿ ಸದಾ ನಿಗಾ ಇಡುತ್ತಾನೆ. ಆದರೆ ವಸತಿ ಶಾಲೆಗಳಲ್ಲಿ 200 ಮಕ್ಕಳ ಬಗ್ಗೆ ನಿಗಾ ಇಡಲು ಆಗುತ್ತಿಲ್ಲ ಎಂದರೆ ನೀವು ಸಂಬಳ ತೆಗೆದುಕೊಂಡು ಏನು ಮಾಡುತ್ತೀರಿ? ನೀವು ಮಕ್ಕಳ ವರ್ತನೆಗಳ ಬಗ್ಗೆ ನಿಗಾ ಇಡಲು ಆಗುವುದಿಲ್ಲ ಎಂದರೆ ಆ ಕುರಿಗಾಹಿಯ ಬುದ್ಧಿವಂತಿಕೆ, ಕಾಳಜಿ ಮುಂದೆ ನೀವು ಅಲ್ಪರಾಗುತ್ತಿದ್ದೀರಿ ಎಂದು ವಸತಿಶಾಲೆಗಳ ಪ್ರಾಂಶುಪಾಲರು, ವಾರ್ಡನ್ ಗಳ ನಿರ್ಲಕ್ಷ್ಯದ ವಿರುದ್ಧ ಶಾಸಕರು ಖೇದ ವ್ಯಕ್ತಪಡಿಸಿದರು.