ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಮಠ-ಮಾನ್ಯಗಳ ಗುರುಗಳು ನಡೆಸುವ ಧರ್ಮ ಸಭೆಗಳಿಂದ ಪರಿಹಾರ ಸಿಗುತ್ತಿದೆ.
ಕೊಟ್ಟೂರು: ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಮಠ-ಮಾನ್ಯಗಳ ಗುರುಗಳು ನಡೆಸುವ ಧರ್ಮ ಸಭೆಗಳಿಂದ ಪರಿಹಾರ ಸಿಗುತ್ತಿದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬರು ಧಾರ್ಮಿಕ ಗುರುಗಳತ್ತ ಎದುರು ನೋಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಉಜ್ಜಯನಿ ಸದ್ಧರ್ಮ ಪೀಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಲಕ್ಷದೀಪೋತ್ಸವ, ಲಿಂ.ಜಗದ್ಗುರು ಮರುಳು ಸಿದ್ದಶಿವಾಚಾರ್ಯರ 14ನೇ ಪುಣ್ಯ ಸಂಸ್ಮರೋಣೋತ್ಸವದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಮಾಡುವ ಮುನ್ನವೇ ವೀರಶೈವ ಮಠ-ಮಾನ್ಯಗಳು ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯಕ್ರಮವನ್ನು ನಿರಂತರವಾಗಿ ಕೈಗೊಂಡು, ತ್ರಿವಿಧ ಸೇವೆಯನ್ನು ಜನತೆಗೆ ನೀಡುತ್ತಿವೆ. ಮಠ-ಮಾನ್ಯಗಳು ಎಂದೂ ಸ್ವಾರ್ಥಕ್ಕಾಗಿ ಕೆಲಸ ಮಾಡಿಲ್ಲ. ಅದರ ಬದಲಾಗಿ ಸಾರ್ಥಕ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ ಎಂದು ಹೇಳಿದರು.
ಆಕರ್ಷಣೆಗೆ ಒಳಗಾದ ಯುವ ಸಮೂಹ ಸರಿದಾರಿಗೆ ತರುವ ನಿಟ್ಟಿನಲ್ಲಿ ಮಠ ಪರಂಪರೆಯವರು ನಿರಂತರ ಸಮಾಜ ಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರಗಳು ಕೆಲಸ ಮಾಡಿದರೆ ಉತ್ತಮ ಮತ್ತು ಸಮಾಜ ಒಗ್ಗೂಡಿಸುವ ಕೆಲಸ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.ಸಂಸದ ಈ. ತುಕಾರಾಮ ಮಾತನಾಡಿ, ಸರ್ಕಾರಕ್ಕೆ ಪರ್ಯಾಯವಾಗಿ ನಡೆದುಕೊಳ್ಳುತ್ತಿರುವುದು ರಾಜ್ಯದ ಮಠ-ಮಾನ್ಯಗಳು ಮಾತ್ರ ಎಂದರು. ಬೀಳಗಿ ಶಾಸಕ ಜೆ.ಟಿ. ಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ಸಮಾಜಕ್ಕೆ ಪ್ರತ್ಯೇಕ ಸ್ವಾಮಿಗಳಾಗಿದ್ದಾರೆ. ಅವರ ಅವರ ಜಾತಿಗೆ ಒಳಿತಾಗುವ ಕೆಲಸ ಮಾಡುತ್ತಿದ್ದಾರೆ. ಆದರೆ ಪಂಚಪೀಠಗಳು ಇಡೀ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಧ್ಯೇಯ ಇರಿಸಿಕೊಂಡು ಸಮಗ್ರ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಪಂಚಾಚಾರ್ಯರರ ಯುಗಮಾನೋತ್ಸವ 2026ರ ಮಾರ್ಚ್ 23ರಿಂದ ಬಳ್ಳಾರಿ ನಗರದಲ್ಲಿ ನಡೆಯಲಿದೆ. ಪಂಚಾ ಪೀಠಾಧೀಶ್ವರರು ಭಾಗವಹಿಸಿ ಸಮಾಜಕ್ಕೆ ಪೂರಕ ಸಂದೇಶ ನೀಡಲಿದ್ದಾರೆ ಎಂದರು.ಉಜ್ಜಿಯನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸದ್ಧರ್ಮ ಶಿರೋಮಣಿ ಪ್ರಶಸ್ತಿಯನ್ನು ರೋಣದ ಶಾಸಕ ಜಿ.ಎಸ್. ಪಾಟೀಲ್ ಮತ್ತು ಸದ್ಧರ್ಮ ಸಿರಿ ಪ್ರಶಸ್ತಿಯನ್ನು ಇಂಡಿ ತಾಲೂಕು ತಮ್ಮಣ್ಣ ಅವರಿಗೆ ಪೀಠದಿಂದ ಜಗದ್ಗುರು ನೀಡಿ ಗೌರವಿಸಿದರು. ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ, ಬಿ. ಚಂದ್ರಪ್ಪ, ಕೃಷ್ಣ ನಾಯಕ್, ದೇವೇಂದ್ರಪ್ಪ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ್, ವರ ಸದ್ಯೋಜಾತ ಸ್ವಾಮೀಜಿ, ಸಿಂಧಿಗೆಯ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು.