ನವಲಗುಂದ:

ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತಾಗಿ ಒಮ್ಮತ್ತದಿಂದ ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಮನೋಜಕುಮಾರ ಅವರನ್ನು ಕರ್ನಾಟಕ ರೈತ ಸೇನೆ ಒತ್ತಾಯಿಸಿದೆ.

ಬೆಂಗಳೂರಲ್ಲಿ ಭೇಟಿಯಾದ ಕರ್ನಾಟಕ ರೈತ ಸೇನೆ ನಿಯೋಗವು, 1976ರಿಂದ ನಿರಂತರವಾಗಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಮನ್ವಯದ ಕೊರತೆಯಿಂದ ಯೋಜನೆಯು ಈ ವರೆಗೆ ಅನುಷ್ಠಾನ ಮಾಡಿಲ್ಲ. ರೈತರ ಕೃಷಿ ಭೂಮಿಗೆ ನೀರು ಒದಗಿಸಿಲ್ಲ. ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನ್ಯಾಯಾಧಿಕರಣದ ಆದೇಶದಂತೆ ಕೇಂದ್ರದ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದು ಕಡ್ಡಾಯ. ಆದರೆ, ಕೇಂದ್ರ ಅರಣ್ಯ ಇಲಾಖೆಯ ಉನ್ನತಾಧಿಕಾರ ಸಮಿತಿಗೆ ಯೋಜನೆ ಜಾರಿಗೊಳಿಸುವ ಅನ್ವಯ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಈ ಯೋಜನೆ ನಿಂತರೆ 5.20 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಇಲ್ಲದಂತಾಗಿದೆ. ಅರಣ್ಯ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯತೆಯಿಂದ ರಾಜ್ಯ ಮತ್ತು ಕೇಂದ್ರದ ಏಕ ಸಾಮ್ಯತೆ ಇರಬೇಕು, ಆದ್ದರಿಂದ ತುರ್ತಾಗಿ ಈ ಯೋಜನೆ ಜಾರಿಗೊಳಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ತಯಾರಿಸಿ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಕರ್ನಾಟಕ ರೈತಸೇನೆಯ ಅಧ್ಯಕ್ಷ ಶಂಕರಪ್ಪ ಅಂಬಲಿ ನೇತೃತ್ವದ ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘದ ಗದಗ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟಿಲ್, ಗ್ಲೋಬಲ್ ಗ್ರೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರವೀಣ್ ನಾಯಕ್ ಇದ್ದರು.