ಸಾರಾಂಶ
ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬಸ್ ಸ್ಥಗಿತಗೊಳಿಸಿ ಎಲ್‌ಆರ್‌ಟಿ ಜಾರಿಗೊಳಿಸುವ ಕುರಿತಂತೆ ಚಿಂತನೆ ನಡೆದಿರುವ ಬೆನ್ನಲ್ಲೇ, ಬಿಆರ್‌ಟಿಎಸ್ ಬಸ್‌ಗಳಿಂದ ಜನರಿಗೆ ಆಗುತ್ತಿರುವ ತೊಂದರೆ ಏನು? ಆರ್ಥಿಕವಾಗಿ ಸದೃಢ ಮಾಡುವ ಬಗೆಯೇನು? ಎಂಬುದನ್ನು ಅರಿಯಲು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಪ್ರಗತಿ ಪರಿಶೀಲನೆ ನಡೆಸಿದರು.ಬಿಆರ್‌ಟಿಎಸ್‌ಗಳಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿಯಾಗಿದೆ. ಜತೆಗೆ ಲಾಭದಲ್ಲೂ ಇಲ್ಲ. ಆದಕಾರಣ ಇದನ್ನು ಸ್ಥಗಿತಗೊಳಿಸಿ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದುಂಟು. ಇದಕ್ಕೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಎಲ್‌ಆರ್‌ಟಿ ನಡೆಸಲು ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಏಜೆನ್ಸಿಯೊಂದರಿಂದ ಸಮೀಕ್ಷೆ ಕೂಡ ಮಾಡಿಸಿದ್ದುಂಟು.
ಇದೆಲ್ಲದರ ನಡುವೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ ಅವರು ನಗರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಜತೆಗೆ ಚಿಗರಿ ಬಸ್‌ನಲ್ಲೂ ಓಡಾಡಿ, ಪ್ರಯಾಣಿಕರ ಅಭಿಪ್ರಾಯ ಕೂಡ ಸಂಗ್ರಹಿಸಿದರು. ಇದರೊಂದಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಿಆರ್‌ಟಿಟಿಎಸ್ ಕಾರಿಡಾರ್‌ಗಳಲ್ಲಿ ಚಿಗರಿ ಬಸ್‌ಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಅನುಕೂಲವಾಗುವ ರೀತಿಯಲ್ಲಿ ಸಿವ್ಹಿಲ್ ಕಾಮಗಾರಿ ಕೈಗೊಳ್ಳಬೇಕು. ಸದ್ಯ ಇರುವ ಬಿಆರ್‌ಟಿಎಸ್ ಮೂಲಸೌಕರ್ಯಗಳ ನಿರ್ವಹಣೆ ಮತ್ತು ಚಿಗರಿ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ ಐಟಿಎಸ್ ತಾಂತ್ರಿಕತೆ ಮತ್ತು ಜಂಕ್ಷನ್‍ಗಳಲ್ಲಿ ಅಳವಡಿಸಿದ ಸಿಗ್ನಲ್‍ಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಸೂಚಿಸಿದರು.
ಚಿಗರಿಯಲ್ಲಿ ಪ್ರಯಾಣ:ಬಿಆರ್‌ಟಿಎಸ್ ಸಾರಿಗೆ ಸೇವೆಯ ಬಗ್ಗೆ ಸಾರ್ವಜನಿಕ ಪ್ರಯಾಣಿಕರಿಂದ ಅಭಿಪ್ರಾಯ ತಿಳಿಯಲು ಡಾ. ರಾಮ್ ಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಎಚ್‍ಡಿಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಚಿಗರಿ ಬಸ್‍ನಲ್ಲಿ ಪ್ರಯಾಣಿಸಿ ಪ್ರಯಾಣಿಕರಿಂದ ಅಭಿಪ್ರಾಯ ಪಡೆದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಹೆಚ್‍ಡಿಬಿಆರ್‌ಟಿಎಸ್ ಪ್ರಧಾನ ವ್ಯವಸ್ಥಾಪಕರು, ಮುಖ್ಯ ಸಂಚಾರ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ವಾಕರಸಾ ಸಂಸ್ಥೆ, ಬಿಆರ್‌ಟಿಎಸ್ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.