ಸಾರಾಂಶ
ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶನಿವಾರ ಹಮ್ಮಿಕೊಂಡಿದ್ದ ಖರ್ಗೆ ಮನೆ ಮುತ್ತಿಗೆ ಹೋರಾಟಕ್ಕೆ ಕೌಂಟರ್ ನೀಡಿದ ಕಾಂಗ್ರೆಸ್ ಕಾರ್ಯಕರ್ತರು, ಸಚಿವರ ಮನೆ ಬಳಿ ನೀರು, ಟೀ, ಕಾಫಿ ಮತ್ತು ಎಳನೀರು ವ್ಯವಸ್ಥೆ ಮಾಡಿ ‘ಗಾಂಧಿಗಿರಿ’ ನಡೆಸಿದರು.
ಕಲಬುರಗಿ : ಭಾಲ್ಕಿ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶನಿವಾರ ಹಮ್ಮಿಕೊಂಡಿದ್ದ ಖರ್ಗೆ ಮನೆ ಮುತ್ತಿಗೆ ಹೋರಾಟಕ್ಕೆ ಕೌಂಟರ್ ನೀಡಿದ ಕಾಂಗ್ರೆಸ್ ಕಾರ್ಯಕರ್ತರು, ಸಚಿವರ ಮನೆ ಬಳಿ ನೀರು, ಟೀ, ಕಾಫಿ ಮತ್ತು ಎಳನೀರು ವ್ಯವಸ್ಥೆ ಮಾಡಿ ‘ಗಾಂಧಿಗಿರಿ’ ನಡೆಸಿದರು.
ಬಿಜೆಪಿ ಮುಖಂಡರು ಖರ್ಗೆಯವರ ಕಲಬುರಗಿ ನಿವಾಸಕ್ಕೆ ಮುತ್ತಿಗೆ ಹಾಕಲು ಆಗಮಿಸುವ ಹೊತ್ತಲ್ಲೇ ಇಲ್ಲಿನ ಐವಾನ್ ಏ ಷಾಹಿ ಬಡಾವಣೆಯಲ್ಲಿರುವ ಲುಂಬಿಣಿ ಮನೆಯಂಗಳದಲ್ಲಿ ಯುವ ಕಾಂಗ್ರಸ್ಸಿಗರು, ಪ್ರಿಯಾಂಕ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅವರಿಗೆ ಖಡಕ್ ಕೌಂಟರ್ ನೀಡಲು ಪಾನೀಯ ವ್ಯವಸ್ಥೆ ಮಾಡಿದ್ದರು.
ಚಹಾ ನೀಡುತ್ತೇನೆ ಎಂದಿದ್ದ ಪ್ರಿಯಾಂಕ್:
ವಾರದ ಹಿಂದೆ ಬಿಜೆಪಿ ಹೋರಾಟದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಒಂದು ವೇಳೆ, ಬಿಜೆಪಿ ಮುಖಂಡರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸುವುದಕ್ಕೂ ಮೊದಲು ಎಷ್ಟು ಮಂದಿ ಬರುತ್ತಿರುವುದಾಗಿ ಮೊದಲೇ ತಿಳಿಸಿದರೆ ಅವರಿಗೆ ಚಹ-ಬಿಸ್ಕೆಟ್ ವ್ಯವಸ್ಥೆ ಮಾಡಿಸುವುದಾಗಿ ಟಾಂಗ್ ನೀಡಿದ್ದರು. ತಮ್ಮ ನಾಯಕನ ಈ ಹೇಳಿಕೆಗೆ ಅನುಸಾರವಾಗಿಯೇ ಇಂಥದ್ದೊಂದು ‘ಆತಿಥ್ಯ’ ವ್ಯವಸ್ಥೆ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯುತ್ತರ ನೀಡಿದರು.