ಸಾರಾಂಶ
ಕ್ರಿಸ್ತ ಪೂರ್ವದಲ್ಲಿಯೇ ಚೀನಾದಲ್ಲಿ ಒಂದು ವಸ್ತುವಿಗೆ ಆ ವಸ್ತು ಸಿದ್ಧವಾದ ಪ್ರದೇಶವನ್ನಾಳುತ್ತಿದ್ದ ಚಕ್ರವರ್ತಿಯ ಹೆಸರಿನಿಂದಲೋ ಅಥವಾ ಆ ವಸ್ತುವಿನ ತಯಾರಕನ ಹೆಸರಿನಲ್ಲಿಯೋ ವಿಶಿಷ್ಟವಾದ ಚಿಹ್ನೆಗಳನ್ನು ಗುರುತಿಗಾಗಿ ಬಳಸುತ್ತಿದ್ದುದ್ದನ್ನು ಕಾಣುತ್ತೇವೆ. ಮುಂದೆ ಸುಮಾರು ಕ್ರಿ.ಶ. ಎರಡನೇ ಶತಮಾನದಲ್ಲಿ ಗ್ರೀಕರು ಮತ್ತು ರೋಮನ್ನರೂ ಸರಕುಗಳ ತಯಾರಕರ ಹೆಸರಿನಲ್ಲಿ ಗುರುತಿನ ಮುದ್ರೆಗಳನ್ನು ಬಳಸುತ್ತಿದ್ದ ವ್ಯವಸ್ಥೆಯನ್ನು ಕಾಣಬಹುದಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ತಂತ್ರಜ್ಞಾನವು ಬಹಳ ಮುನ್ನಡೆಯನ್ನು ಸಾಧಿಸಿರುವ ಈ ಕಾಲಘಟ್ಟದಲ್ಲಿ ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತಾದ ಹೆಚ್ಚಿನ ಅರಿವನ್ನು ಹೊಂದುವುದು ಕಾನೂನು ವಿದ್ಯಾರ್ಥಿಗಳಿಗೆ ಬಹಳ ಅನಿವಾರ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದರ್ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜು ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಸಮಕಾಲೀನ ಸವಾಲುಗಳಲ್ಲಿ ವಿಕಸನಗೊಳ್ಳುತ್ತಿರುವ ಪ್ರವೃತ್ತಿಗಳು ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪ್ರಾಚೀನ ಕಾಲದಲ್ಲಿ ಒಬ್ಬ ಮನುಷ್ಯನ ಬೌದ್ಧಿಕ ಸೃಷ್ಟಿಯನ್ನು ರಕ್ಷಿಸುವ ಕುರಿತಾಗಿ ಬಹಳ ಕಾಳಜಿ ವಹಿಸಿದ್ದು ಕಂಡು ಬರುತ್ತದೆ. ಏಕೆಂದರೆ ಒಂದು ವ್ಯವಹಾರವು ಸಮರ್ಥವಾಗಿ ಮುಂದುವರೆಯಲು ಪೇಟೆಂಟ್ ಮತ್ತು ಗ್ರಂಥಸ್ವಾಮ್ಯಗಳ ರಕ್ಷಣೆಯು ಮೂಲಭೂತವಾಗಿದೆ ಎಂದರು.ಕ್ರಿಸ್ತ ಪೂರ್ವದಲ್ಲಿಯೇ ಚೀನಾದಲ್ಲಿ ಒಂದು ವಸ್ತುವಿಗೆ ಆ ವಸ್ತು ಸಿದ್ಧವಾದ ಪ್ರದೇಶವನ್ನಾಳುತ್ತಿದ್ದ ಚಕ್ರವರ್ತಿಯ ಹೆಸರಿನಿಂದಲೋ ಅಥವಾ ಆ ವಸ್ತುವಿನ ತಯಾರಕನ ಹೆಸರಿನಲ್ಲಿಯೋ ವಿಶಿಷ್ಟವಾದ ಚಿಹ್ನೆಗಳನ್ನು ಗುರುತಿಗಾಗಿ ಬಳಸುತ್ತಿದ್ದುದ್ದನ್ನು ಕಾಣುತ್ತೇವೆ. ಮುಂದೆ ಸುಮಾರು ಕ್ರಿ.ಶ. ಎರಡನೇ ಶತಮಾನದಲ್ಲಿ ಗ್ರೀಕರು ಮತ್ತು ರೋಮನ್ನರೂ ಸರಕುಗಳ ತಯಾರಕರ ಹೆಸರಿನಲ್ಲಿ ಗುರುತಿನ ಮುದ್ರೆಗಳನ್ನು ಬಳಸುತ್ತಿದ್ದ ವ್ಯವಸ್ಥೆಯನ್ನು ಕಾಣಬಹುದಾಗಿದೆ. 1266ರಲ್ಲಿ ಇಂಗ್ಲಿಷ್ ಸಂಸತ್ತು ಪ್ರತಿಯೊಬ್ಬ ಬೇಕರಿ ಮಾಲೀಕನೂ ಒಂದೊಂದು ವಿಶಿಷ್ಟ ಚಿಹ್ನೆಗಳನ್ನು ತಾನು ತಯಾರಿಸಿದ ಬ್ರೆಡ್ಡುಗಳ ಮೇಲೆ ಬಳಸಬೇಕು ಎಂದು ಕಾನೂನನ್ನು ತಂದಿತು ಎಂದು ಅವರು ವಿವರಿಸಿದರು.14 ಮತ್ತು 15ನೇ ಶತಮಾನಗಳಲ್ಲಿ ಚಿಹ್ನೆಗಳ ಜೊತೆ ಲಾಂಛನಗಳ ರೂಪದ ಲೋಗೋಗಳನ್ನು ಬಳಸುವ ವ್ಯವಸ್ಥೆ ಹುಟ್ಟಿಕೊಂಡಿತು. ಈ ಎಲ್ಲದರ ಪರಿಣಾಮವಾಗಿ ಈ ದಿನ ನಾವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿಯೂ ಪೇಟೆಂಟ್ ಕಾನೂನಿನ ಅವಶ್ಯಕತೆ ಮತ್ತು ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ನ್ಯಾಯಶಾಸ್ತ್ರಜ್ಞರು ಬೌದ್ಧಿಕ ಸ್ವತ್ತಿನ ಕಾನೂನುಗಳನ್ನು ರಾಷ್ಟ್ರಗಳ ನವ ಸಂಪತ್ತು ಎಂದು ಕರೆದಿದ್ದಾರೆ ಎಂದು ಅವರು ತಿಳಿಸಿದರು.ಇದೀಗ ಕೃತಕ ಬುದ್ಧಿಮತ್ತೆ ಮತ್ತು ಪೇಟೆಂಟುಗಳ ಕ್ಷೇತ್ರದಲ್ಲಿ ಕೆಲವು ಮಿತಿಗಳೂ ಕಂಡು ಬರುತ್ತಿವೆ. ನಾವೆಲ್ಲ ಮೊಬೈಲ್ ಗಳನ್ನು ಬಳಸಿ ಸಂದೇಶಗಳನ್ನು ಕಳಿಸುವಾಗ ಮೊಬೈಲ್ ಭಾಷೆಯನ್ನು ಬಳಸುತ್ತಿದ್ದೇವಷ್ಟೇ. ಇದು ನಮಗೆ ಸಂವಹನದ ಸುಲಭ ಸೌಲಭ್ಯವನ್ನು ಕಲ್ಪಿಸಿರಬಹುದು. ಆದರೆ, ಇಂದಿನ ಮಕ್ಕಳು ಇಂಗ್ಲಿಷ್ ಭಾಷೆಯ ಪದಗಳ ನಿಜವಾದ ಸ್ಪೆಲ್ಲಿಂಗ್ ಗಳನ್ನೇ ಮರೆಯುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಇದೊಂದು ಚಿಂತಾಜನಕ ಬೆಳವಣಿಗೆ. ಅಂತೆಯೇ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಪಶ್ಚಿಮ ಬಂಗಾಳದ ಎನ್ ಯುಜೆಎಸ್ ಕಾನೂನು ಪ್ರಾಧ್ಯಾಪಕ ಡಾ.ಎನ್.ಎಸ್. ಶ್ರೀನಿವಾಸುಲು ಮುಖ್ಯ ಭಾಷಣ ಮಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಕಾಲೇಜಿನ ಸಿಎಂಸಿ ಮುಖ್ಯಸ್ಥ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮ ಸಂಯೋಜಕ ಡಾ.ಎನ್.ಜೆ. ಕುಮಾರ್ ಇದ್ದರು. ಎಂ.ಜೆ. ಇಂದುಮತಿ ನಿರೂಪಿಸಿದರು. ‘ಕಾನೂನು ವೃತ್ತಿ ನಿಜಕ್ಕೂ ಒಂದು ಘನವಾದ, ಘನತೆಯಿಂದ ಕೂಡಿದ ವೃತ್ತಿ. ಇದನ್ನು ಯಾರದೋ ಒತ್ತಾಯಕ್ಕೆ ಮಣಿದೋ ಅಥವಾ ಅನಿವಾರ್ಯಕ್ಕೋ ಅಲ್ಲದೆ ಇಷ್ಟಪಟ್ಟು ಆಯ್ದುಕೊಳ್ಳಬೇಕು. ಇಂದು ಈ ಕ್ಷೇತ್ರದಲ್ಲಿ ಸ್ಪರ್ಧೆ ಗಣನೀಯವಾಗಿ ಬೆಳೆದಿದೆ. ಕೇವಲ ಬೆಂಗಳೂರಿನಲ್ಲಿಯೇ 25 ಸಾವಿರ ವಕೀಲರಿದ್ದಾರೆ. ಹೀಗಿರುವಾಗ ನೀವು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ದಿನಕ್ಕೊಂದರಂತೆ ತೀರ್ಪುಗಳನ್ನು ಓದಬೇಕು. ವೃತ್ತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಉತ್ತಮವಾದ ಕೌಶಲವನ್ನು, ಮಾತಿನ ಕಲೆಯನ್ನು ಬೆಳೆಸಿಕೊಳ್ಳಬೇಕು. ಹೀಗೆ ಶ್ರಮಪಟ್ಟರೆ ಮಾತ್ರ ಈ ವೃತ್ತಿಯಲ್ಲಿ ಗೆಲುವು ಸಾಧ್ಯ ಮತ್ತು ಉತ್ತಮ ವಕೀಲ, ನ್ಯಾಯಾಧೀಶರೂ ನಿಮ್ಮಿಂದ ಹೊರ ಬರಲು ಸಾಧ್ಯ.’ - ನ್ಯಾ. ರಾಮಚಂದ್ರ ಡಿ. ಹುದ್ದರ್, ಕರ್ನಾಟಕ ಹೈಕೋರ್ಟ್