ಸಾರಾಂಶ
ಮಂಗಳೂರು: ಶಕ್ತಿನಗರದ ಅರಿವು ಅರ್ಲಿ ಇಂಟರ್ವೆನ್ಶನ್ ಸೆಂಟರ್, ಬೆಂಗಳೂರಿನ ಎಸೋಸಿಯೇಶನ್ ಫಾರ್ ಪೀಪಲ್ ವಿದ್ ಡಿಸೇಬಲಿಟೀಸ್ ವತಿಯಿಂದ ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಸಹಯೋಗದೊಂದಿಗೆ ಕಾಲೇಜಿನ ಶಂಕರಶ್ರೀ ಸಭಾಂಗಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸುವ ಅರಿವು ಸಂಸ್ಥೆಯ ಹೊರಕೇಂದ್ರ ಉದ್ಘಾಟನೆಗೊಂಡಿತು. ಹಿರಿಯ ದಂತವೈದ್ಯ ಡಾ. ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಇಂಥ ಕೇಂದ್ರಗಳ ಅಗತ್ಯವಿದ್ದು, ಜನಸಾಮಾನ್ಯರಿಗೆ ಇದರ ಪ್ರಯೋಜನ ದೊರಕಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ತಜ್ಞ ವೈದ್ಯ ಡಾ. ಮುರಳೀ ಕೇಶವ ಮಾತನಾಡಿ, ಮಕ್ಕಳ ಬೆಳವಣಿಗೆಯ ಹಂತದಲ್ಲೇ ದೈಹಿಕ ನ್ಯೂನತೆಗಳ ಕುರಿತ ಅರಿವು ಆದರೆ ಬೆಳವಣಿಗೆಯ ಹಂತದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಯೋಚಿಸಲು ಸಹಕಾರಿಯಾಗುತ್ತದೆ ಎಂದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ಶ್ರೀ ಭಾರತೀ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಗಂಗಾರತ್ನ, ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಪತ್ರಕರ್ತ ಹರೀಶ ಮಾಂಬಾಡಿ, ಶಿಕ್ಷಕಿ ಸುಪ್ರೀತಾ ಶೆಟ್ಟಿ ಮಾತನಾಡಿದರು. ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಂದರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಸಂಸ್ಥೆಯ ಟ್ರಸ್ಟಿ ಡಾ. ರಾಧಾಕೃಷ್ಣ ಭಟ್ ಇದ್ದರು.