ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ರೈತರು ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಡಾ. ಕೆ.ಟಿ ಗುರುಮೂರ್ತಿ ಕರೆ ನೀಡಿದರು.ಅವರು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ರೈತ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ನರ್ಸರಿ ತಾಂತ್ರಿಕತೆ ಅಣಬೆ ಕೃಷಿ ಮತ್ತು ಮೌಲ್ಯವರ್ಧನ ಕುರಿತು ರಾಜ್ಯಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪ್ರಗತಿಪರ ರೈತರಿಗೆ ನಡೆದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ರೈತರು ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಬೇಕು. ರೈತರು ನರ್ಸರಿ ಉದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅಣಬೆ, ಹಣ್ಣು, ತರಕಾರಿ, ಕಸಿ ಗಿಡ, ಔಷಧಿ ಗಿಡ ಸಸ್ಯಗಳನ್ನು ಉತ್ಪಾದನೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.ಕಾರ್ಯನಿರ್ವಹಣಾ ಕಾರ್ಯದರ್ಶಿ ಡಾ. ಯು.ಟಿ. ವಿಜಯ್, ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಮಲೆನಾಡಿನ ಭಾಗದ ರೈತರು ಅಡಿಕೆ ಕೃಷಿ ಜೊತೆಗೆ ವಿವಿಧ ಬೆಳೆಗಳನ್ನು ಬೆಳೆಯುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯ. ಕೃಷಿ ಜೊತೆಗೆ ಮೌಲ್ಯವರ್ಧಿತ ಉತ್ಪಾದನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.ಸಂಶೋಧನಾ ನಿರ್ದೇಶಕ ಡಾ. ದುಶ್ಯಂತ ಕುಮಾರ್ ಮಾತನಾಡಿ, ಮಲೆನಾಡಿನಲ್ಲಿ ಇತ್ತೀಚಿನ ದಿನದಲ್ಲಿ ರೈತರ ಬೆಳೆಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿವೆ. ಆದ್ದರಿಂದ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವಂತೆ ತಿಳಿಸಿದರು.
ಡಾ. ಎಮ್. ಅಶೋಕ್, ಆರ್. ಗಂಗಾಧರಪ್ಪ , ಡಾ. ಕೃಷ್ಣಾರೆಡ್ಡಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.