ಬೇತು ಶ್ರೀ ಮಕ್ಕಿ ಶಾಸ್ತಾವು ದೇವಾಲಯದ ವಾರ್ಷಿಕ ಉತ್ಸವ ಸಂಪನ್ನ

| Published : Dec 22 2024, 01:31 AM IST

ಸಾರಾಂಶ

ಶ್ರೀ ಮಕ್ಕಿ ಶಾಸ್ತವು ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಅಧಿಕ ಸಂಖ್ಯೆ ಭಕ್ತರು ಪಾಲ್ಗೊಂಡರು. ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬೇತು ಗ್ರಾಮದಲ್ಲಿರುವ ನಿಸರ್ಗ ರಮಣೀಯ ತಾಣಗಳಲ್ಲಿ ಒಂದಾದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಶುಕ್ರವಾರ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು.

ಶ್ರೀ ಮಕ್ಕಿಶಾಸ್ತಾವು ಉತ್ಸವ ಕಾರ್ಯಕ್ರಮ ಡಿ. 15 ರಂದು ಭಗವತ್ ಭಕ್ತರು ಹರಕೆಯ ಮಣ್ಣಿನ ನಾಯಿ ಪ್ರತಿಕೃತಿಯನ್ನು ಒಪ್ಪಿಸುವುದರೊಂದಿಗೆ ಪ್ರಾರಂಭವಾಗಿ, ಕೊಟ್ಟಿಪಾಡುವೊ ಕಾರ್ಯಕ್ರಮ ಬುಧವಾರ ರಾತ್ರಿ ಜರುಗಿ, ಗುರುವಾರ ರಾತ್ರಿ ದೀಪಾರಾಧನೆ ನೆರವೇರಿ ಭೂತಾರಾಧನೆಗಳು ಜರುಗಿತು. ಶುಕ್ರವಾರ ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿದ ನಂತರ ವಿಷ್ಣುಮೂರ್ತಿ ಕೋಲ ಕೆಂಡದ ರಾಶಿಯ ಮೇಲೆ ಬೀಳುವಾಗ ಭಕ್ತಾದಿಗಳು ಭಕ್ತಿ ಪರವಶರಾಗಿ ರೋಮಾಂಚನಗೊಂಡರು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಊರ ಮತ್ತು ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ತಾಣ ಸುತ್ತಮುತ್ತಲಿನವರಿಗೆ ಒಂದು ಪುನೀತ ಕ್ಷೇತ್ರವಾಗಿದ್ದು ಮಕ್ಕಿಯಲ್ಲಿ ಹರಸಿ ಕೊಂಡವರ ಬಯಕೆಗಳು ಈಡೇರುತ್ತವೆ ಹಾಗೂ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅಂತೆಯೇ ನಾಪೋಕ್ಲುವಿನ ಮಕ್ಕಿ ದೇವಾಲಯ ಭಕ್ತಿ ತಾಣವಾಗಿ ಪ್ರಸಿದ್ಧಿ ಹೊಂದಿದೆ.