ಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರೋಟರಿ ಶಾಲೆಯ ಸಭಾಭವನದಲ್ಲಿ ಜರುಗಿತು.ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲ ಅಶೋಕ ನಾಯ್ಕ ರೋಟರಿ ಕೇವಲ ಒಂದು ಸಂಸ್ಥೆಯಲ್ಲ, ಅದು ಸೇವೆಯ ಮನೋಭಾವ. ಶಾಶ್ವತ ಪ್ರಭಾವವನ್ನು ಬೀರಿರಿ ಎಂಬ ಘೋಷವಾಕ್ಯದಂತೆ ನಾವು ಮಾಡುವ ಪ್ರತಿಯೊಂದು ಕೆಲಸವೂ ಸಮಾಜದಲ್ಲಿ ಶಾಶ್ವತವಾದ ಪರಿಣಾಮ ಬೀರಬೇಕು. 2025-26ನೇ ಸಾಲಿನಲ್ಲಿ ದಾಂಡೇಲಿ ಕ್ಲಬ್ ಅಶುತೋಷ್ ಕುಮಾರ್ ರಾಯ್ ನೇತೃತ್ವದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದೆ. ನೂತನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಸದಸ್ಯರನ್ನು ಕ್ಲಬಿಗೆ ಸೇರ್ಪಡೆಗೊಳಿಸಿ ರೋಟರಿ ಕ್ಲಬ್‌ನ್ನು ಮತ್ತಷ್ಟು ಬಲವರ್ಧನೆಯ ಜೊತೆಗೆ ಸಾಮಾಜಿಕ ನೆರವನ್ನು ನೀಡಲು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಲೆಂದು ಶುಭ ಹಾರೈಸಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂದು ಆಶಿಸಿದರು.
ರೋಟರಿ ಸಹಾಯಕ ಪ್ರಾಂತಪಾಲ ಶಿವಾನಂದ ನಾಯ್ಕ, ದಾಂಡೇಲಿ ರೋಟರಿ ಕ್ಲಬ್ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಗುರುತಿಸಿಕೊಂಡಿದೆ. ರಕ್ತದಾನ, ವಿದ್ಯಾರ್ಥಿ ವೇತನ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಗಳಲ್ಲಿ ಕ್ಲಬ್ ಮಾಡಿರುವ ಸಾಧನೆ ಶ್ಲಾಘನೀಯ. ನೂತನ ಅಧ್ಯಕ್ಷ ಮಿಥುನ್ ನಾಯಕ ನೇತೃತ್ವದ ತಂಡವು ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಲಿ ಎಂದರು.ನಿರ್ಗಮಿತ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ನೂತನ ಅಧ್ಯಕ್ಷ ಮಿಥುನ್ ನಾಯಕ ಮಾತನಾಡಿದರು.
ರೋಟರಿ ಕ್ಲಬಿನ ನೂತನ ಕಾರ್ಯದರ್ಶಿ ಡಾ. ಜ್ಞಾನದೀಪ ಗಾಂವಕರ, ಖಜಾಂಚಿ ಅಭಿಷೇಕ ಕನ್ಯಾಡಿ, ರೋಟರಿ ಸೇವಾ ನಿರ್ದೇಶಕ ಸುಧಾಕರ ಶೆಟ್ಟಿ, ನಿರ್ಗಮಿತ ಖಜಾಂಚಿ ಲಿಯೋ ಪಿಂಟೋ ಉಪಸ್ಥಿತರಿದ್ದರು. ನೂತನ ಸದಸ್ಯರುಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಲಾಯಿತು.
ಅಶುತೋಷ್ ಕುಮಾರ್ ರಾಯ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಅತಿಥಿಗಳನ್ನು ಹಾಗೂ ನೂತನ ಪದಾಧಿಕಾರಿಗಳನ್ನು ಮತ್ತು ನೂತನ ಸದಸ್ಯರನ್ನು ರಾಜೇಶ್ ತಿವಾರಿ, ಎಸ್.ಪ್ರಕಾಶ ಶೆಟ್ಟಿ, ರಾಹುಲ್ ಬಾವಾಜಿ, ಡಾ. ಅನೂಪ್ ಮಾಡ್ದೋಳ್ಕರ, ಡಾ. ವಿಜಯ್ ತೇಲಿ ಪರಿಚಯಿಸಿದರು. ಡಾ. ಜ್ಞಾನದೀಪ ಗಾಂವಕರ ವಂದಿಸಿದರು. ಡಾ.ಎಚ್.ವೈ. ಮೆರ್ವಾಡೆ ನಿರೂಪಿಸಿದರು. ರಾಜಕೀಯ ಗಣ್ಯರು, ಮುಖಂಡರು, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರೋಟರಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯ ನಾಗರಿಕರು ಭಾಗವಹಿಸಿದ್ದರು.