ಸಾರಾಂಶ
ಉಡುಪಿ: ಎಲ್ಲ ದೇವರನ್ನು ಗೌರವಿಸುವ ಸದ್ಬಾವನೆ ಬೆಳೆದರೆ ಸಮಾಜ ಸುಭಿಕ್ಷವಾಗುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಉಡುಪಿ ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಗೀತಾ ಮಂದಿರದಲ್ಲಿ ನೂತನ ನೃಸಿಂಹ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಹರಿಹರ ಎಂಬ ಮಾನಸಿಕ ದ್ವಂದ್ವಗಳನ್ನು ಬಿಟ್ಟು, ದೇವನೊಬ್ಬ ನಾಮಹಲವು ಎಂದು ಬಸವಣ್ಣ ಹೇಳಿದಂತೆ, ಸಂಕುಚಿತ ಭಾವನೆಯಿಂದ ಹೊರಗೆ ಬಂದು ವಿಶಾಲವಾದ ದೃಷ್ಠಿಯಿಂದ ನೋಡಿದರೇ ಜಗತ್ತೇ ಸರ್ವಂ ದೇವಮಯಂ ಆಗಿ ಕಾಣುತ್ತದೆ. ನಮ್ಮ ಭಾವದಂತೆ ದೇವನಿರುತ್ತಾನೆ. ಈ ಭಾವನೆ ಹಿಂದಿನಿಂದಲೂ ಭಾರತೀಯರಲ್ಲಿ ಇದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಉಡುಪಿ ಹರಿಹರರ ಪುಣ್ಯ ಕ್ಷೇತ್ರ. ಅದೇ ರೀತಿ ಸುತ್ತೂರಿನಲ್ಲಿಯೂ ಚೋಳರ ಕಾಲದಲ್ಲಿ ನಿರ್ಮಾಣವಾದ ಶಂಕರನಾರಾಯಣ ದೇವಾಲಯವೊಂದಿದೆ. ಅದರಲ್ಲಿ ಒಂದು ಕಡೆಯಲ್ಲಿ ವಿಷ್ಣುವಿನ ದಶವಾತಾರಗಳು, ಇನ್ನೊಂದು ಕಡೆಯಲ್ಲಿ ಈಶ್ವರನ ಏಕಾದಶ ಅವತಾರಗಳ ಕೆತ್ತನೆಗಳಿವೆ. ಆದ್ದರಿಂದ ಸುತ್ತೂರಿಗೂ ಉಡುಪಿಗೆ ಒಂದು ರೀತಿಯ ಅಧ್ಯಾತ್ಮಿಕ ಸಂಬಂಧ ಇದೆ ಎಂದು ಶ್ರೀಗಳು ಹೇಳಿದರು.ಈ ಜ್ಞಾನ ಪ್ರಸಾರಕ್ಕಾಗಿ ನಿರ್ಮಿಸಲಾಗಿರುವ ನೃಸಿಂಹ ಸಭಾಭವನವು ಕತ್ತಲನ್ನು ಕಳೆದು ಬೆಳಕನ್ನು ನೀಡುವ ಈ ಕಾರ್ತಿಕ ಮಾಸದಲ್ಲಿ ಉದ್ಘಾಟನೆಗೊಂಡಿದೆ. ಆದ್ದರಿಂದ ಈ ಸಭಾಭವನವು ಅಜ್ಞಾನವನ್ನು ಕಳೆದು ಜ್ಞಾನವನ್ನು ಪಸರಿಸಲಿ ಎಂದು ಹಾರೈಸಿದರು. ಪುತ್ತಿಗೆ ಶ್ರೀಗಳು 2 ವರ್ಷಗಳ ಹಿಂದೆ ತಮ್ಮ ಕೋಟಿ ಗೀತಾ ಲೇಖನ ಯಜ್ಞದ ಪುಸ್ತಕಗಳನ್ನು ತಾವು ಅಮೆರಿಕದ ಶಿಕಾಗೋ ನಗರದಲ್ಲಿ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡ ಸುತ್ತೂರು ಶ್ರೀಗಳು, ವಿಶ್ವದ ಮೂಲೆಮೂಲೆಗೆ ಕೃಷ್ಣ ಮತ್ತು ಗೀತೆಯನ್ನು ತಲುಪಿಸಿದ ಕೀರ್ತಿ ಪುತ್ತಿಗೆ ಶ್ರೀಗಳಿಗೆ ಸಲ್ಲುತ್ತದೆ ಎಂದು ಕೊಂಡಾಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸುತ್ತೂರು ಶ್ರೀಗಳಿಗೆ ಬೃಹತ್ ಕಡೆಗೋಲು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒರಿಸ್ಸಾದ ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ದೀಕ್ಷಿತ್ - ಯೋಗಿನಿ ದೀಕ್ಷಿತ್ ಅವರಿಗೆ ಅನುಗ್ರಹ ಸನ್ಮಾನ ನೀಡಿದರು ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಆರ್‌ಎಸ್‌ಎಸ್‌ನ ಹಿರಿಯರಾದ ಶಂಭು ಶೆಟ್ಟಿ, ಯುಟ್ಯೂಬರ್ ರವೀಂದ್ರ ಜೋಷಿ ಉಪಸ್ಥಿತರಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))