ಶಿವಾನಂದ ಗೊಂಬಿ
ಹುಬ್ಬಳ್ಳಿ:ದಶಕದ ಬಳಿಕ ಉತ್ತರ ಕರ್ನಾಟಕದ ಭಾಗದ ಅತಿ ದೊಡ್ಡ ಕೈಗಾರಿಕಾ ವಸ್ತು ಪ್ರದರ್ಶನ ಇನ್‌ಕಾಮೆಕ್ಸ್- 2026ಕ್ಕೆ ವಾಣಿಜ್ಯ ನಗರಿ ಸಜ್ಜುಗೊಂಡಿದೆ. ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಕೈಗಾರಿಕೋದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, ಕೈಗಾರಿಕೆ ಪ್ರಾರಂಭಿಸಬೇಕು, ಉದ್ಯಮಿಗಳಾಗಬೇಕೆಂಬ ಕನಸು ಕಟ್ಟಿಕೊಂಡಿರುವ ಯುವ ಸಮೂಹಕ್ಕೆ ಉತ್ತೇಜನ, ಪ್ರೇರಣೆ ನೀಡುವುದೇ ಎಂಬ ಕುತೂಹಲ ಹೆಚ್ಚಿಸಿದೆ.
ಇಲ್ಲಿನ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನೇತೃತ್ವದಲ್ಲಿ ಶನಿವಾರದಿಂದ 5 ದಿನ ಪ್ರದರ್ಶನ ಹಾಗೂ ಸಮಾವೇಶ ಈ ಕುತೂಹಲ ಹೆಚ್ಚಿಸಿದೆ. ಆದರೆ, ಇದಕ್ಕೆ ಉತ್ತರ ಸಮಾವೇಶದ ಬಳಿಕವೇ ದೊರೆಯಲಿದೆ. ಆದರೆ, ಸಮಾವೇಶಕ್ಕೆ ಸಿದ್ಧತೆ ಮಾತ್ರ ಭರದಿಂದ ಸಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆ, ವಿವಿಧ ಕೈಗಾರಿಕೋದ್ಯಮಿಗಳು ಕೈ ಜೋಡಿಸಿದ್ದಾರೆ.ಪ್ರತಿಷ್ಠಿತ ಕಂಪನಿ:
ದೇಶದ ಪ್ರತಿಷ್ಠಿತ ಕಂಪನಿಗಳಾದ ಎಚ್‌ಎಎಲ್, ಬಿಎಚ್‌ಇಎಲ್, ಬಿಇಎಂಎಲ್, ಎನ್‌ಪಿಸಿಎಲ್, ಎನ್‌ಪಿಸಿಐಎಲ್ ಹಾಗೂ ಗೋವಾ ಶಿಪ್ಯಾರ್ಡ್ ಸಂಸ್ಥೆ ಸೇರಿದಂತೆ 300ಕ್ಕೂ ಉದ್ಯಮಿಗಳು ತಮ್ಮ ವಸ್ತು ಪ್ರದರ್ಶಿಸಲಿವೆ. ಇದಲ್ಲದೇ, ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ರೇಲ್ ಕೋಚ್ ಕಾರ್ಖಾನೆ, ಇಂಟಿಗ್ರಲ್ ಕೋಚ್ ಕಾರ್ಖಾನೆ,. ಚೈನ್ ರೇಲ್ ವ್ಹೀಲ್ ಕಾರ್ಖಾನೆ, ಮಾರ್ಡನ್ ಕೋಚ್ ಕಾರ್ಖಾನೆಗಳು ಇನ್‌ಕಾಮೆಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಪ್ರದರ್ಶನವಷ್ಟೇ ಅಲ್ಲ:
ಬರೀ ಪ್ರದರ್ಶನಕ್ಕಷ್ಟೇ ಇನ್‌ಕಾಮೆಕ್ಸ್ ಸೀಮಿತವಾಗಿಲ್ಲ. ಬದಲಿಗೆ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಡಿಜಿಟಲ್ ಮಾರ್ಕೆಟಿಂಗ್, ಬ್ಯ್ರಾಂಡಿಂಗ್ ಈ ಬಗ್ಗೆ ಕೂಡ ಚರ್ಚೆ, ಸಂವಾದ ನಡೆಯಲಿದೆ. ಟಾಟಾ ಪ್ರಾಜೆಕ್ಟ್ ಎಂಡಿ ವಿನಾಯಕ ಪೈ, ಜೆಎಸ್‌ಡಬ್ಲೂ ಸ್ಟೀಲ್ ಲಿಮಿಟೆಡ್‌ನ ಸಂಜಯ ಅಲಮೇಲಕರ್, ಗೋವಾ ಮರ್ಮಗೋವಾ ಅರ್ಥಾರಿಟಿಯ ವಿನಾಯಕ ರಾವ್ ಸೇರಿದಂತೆ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಎಂಎಸ್‌ಎಂಇ ಎಐ ಬಳಕೆ ಕುರಿತು ಗೀತಂ ವಿವಿ ನಿರ್ದೇಶಕಿ ಡಾ. ಅನುಪಮಾ ನಿತ್ಯಾನಂದ ವಿಷಯ ಮಂಡಿಸಲಿದ್ದು ಉದ್ಯಮ ಪ್ರಾರಂಭಿಸುವ ಬಗೆಯಿಂದ ಅದನ್ನು ಬೆಳೆಸುವ ಕುರಿತಂತೆ ಸಮಗ್ರ ಮಾಹಿತಿ ಇನ್‌ಕಾಮೆಕ್ಸ್‌ನಲ್ಲಿ ಲಭ್ಯವಾಗಲಿದೆ. ಯುವಕರಿಗೆ ಅಕ್ಷರಶಃ ಮಾರ್ಗದರ್ಶಕದಂತೆ ಇದು ಕೆಲಸ ಮಾಡಲಿದೆ.ಶ್ವೇತಪತ್ರ ಬಿಡುಗಡೆ:
ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳು ಏಕೆ ಬರುತ್ತಿಲ್ಲ. ಸರ್ಕಾರ ಎಲ್ಲಿ ಎಡವುತ್ತಿದೆ. ಇಲ್ಲಿ ಇರುವ ಸೌಲಭ್ಯಗಳೇನು? ಕೈಗಾರಿಕೆಗಳನ್ನು ತರಬೇಕೆಂದರೆ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬುದರ ಕುರಿತು ಪ್ರದರ್ಶನ ಮುಗಿದ ಬಳಿಕ ಶ್ವೇತಪತ್ರ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೇ, ಸರ್ಕಾರಕ್ಕೆ ಅದನ್ನು ಸಲಹಾರೂಪದಲ್ಲಿ ಕೆಸಿಸಿಐ ಮನವಿ ಸಲ್ಲಿಸುತ್ತಿರುವುದು ವಿಶೇಷ.5 ದಿನದ ಸಮಾವೇಶದಲ್ಲಿ ನಿತ್ಯ 50 ಸಾವಿರ ಜನರಂತೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಭೇಟಿ ನೀಡುವ ನಿರೀಕ್ಷೆಯಿದೆ. ಜನರಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಸಕಲ ಸೌಲಭ್ಯಗಳನ್ನು ಕೆಸಿಸಿಐ ಒದಗಿಸುತ್ತಿದೆ.
ಎಪಿಎಂಸಿ ಪ್ರಾಂಗಣದಲ್ಲಿ ದೊಡ್ಡ ಜರ್ಮನ್ ಟೆಂಟ್ ಹಾಕಿ ಅದರೊಳಗೆ 300ಕ್ಕೂಅಧಿಕ ಮಳಿಗೆ ಸ್ಥಾಪಿಸಲಾಗಿದೆ. ಹಳ್ಳಿಯ ಉದ್ಯಮಿಯಿಂದ ಮೆಟ್ರೋ ಪಾಲಿಟಿನ್ ನಗರದ ಉದ್ಯಮಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.ಹಿಂದೆ ಇಲ್ಲಿ ನಡೆದಿದ್ದ ಇನ್‌ಕಾಮೆಕ್ಸ್‌ನಿಂದಾಗಿ ಇಲ್ಲಿನ ಸೌಲಭ್ಯ ತಿಳಿದುಕೊಂಡು ಟಾಟಾ ಮಾರ್ಕಪೋಲೋ ಕಾರ್ಖಾನೆ ಸ್ಥಾಪನೆಯಾಗಿದ್ದು, ಇದೀಗ ಈ ಇನ್‌ಕಾಮೆಕ್ಸ್‌ನಿಂದಾಗಿ ಇನ್ನಷ್ಟು ಕೈಗಾರಿಕೆಗಳು ಉತ್ತರ ಕರ್ನಾಟಕದತ್ತ ಬರಲಿ ಎಂಬುದು ಜನರ ಆಶಯ.10 ವರ್ಷದ ಬಳಿಕ ಇನ್‌ಕಾಮೆಕ್ಸ್...
1996ರಲ್ಲಿ ಮೊದಲ ಬಾರಿಗೆ ಇನ್‌ಕಾಮೆಕ್ಸ್ ನಡೆಸಲಾಗಿತ್ತು. ಅಲ್ಲಿಂದ 2002, 2007, 2013, 2016ರಲ್ಲಿ ನಡೆಸಲಾಗಿತ್ತು. 2022ರಲ್ಲಿ ನಡೆಸಲು ಉದ್ದೇಶಿಸಿದರೂ ಕೊರೋನಾದಿಂದಾಗಿ ನಡೆಸಿರಲಿಲ್ಲ. ಇದೀಗ ದಶಕದ ಬಳಿಕ ಇನ್‌ಕಾಮೆಕ್ಸ್ ನಡೆಯುತ್ತಿದೆ. 10 ವರ್ಷದ ಬಳಿಕ ಇನ್‌ಕಾಮೆಕ್ಸ್ ಮಾಡಲಾಗುತ್ತಿದೆ. ಈ ಭಾಗದ ಉದ್ಯಮಿಗಳು ಹೂಡಿಕೆ ಮಾಡುವಂತೆ ಆಕರ್ಷಿಸಲು ಇದು ವೇದಿಕೆಯಾಗಲಿದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಪಾಲ್ಗೊಳ್ಳುತ್ತಿವೆ. ಸರ್ಕಾರಗಳು ಕೈ ಜೋಡಿಸಿವೆ. ಇದು ಉತ್ತರ ಕರ್ನಾಟಕದ ಅಭಿವೃದ್ಧಿ ದಿಕ್ಸೂಚಿ ಒದಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.ಜಿ.ಕೆ. ಆದಪ್ಪಗೌಡರ, ಅಧ್ಯಕ್ಷರು, ಕೆಸಿಸಿಐ