ಸಾರಾಂಶ
ಕನ್ನಡರಪ್ರಭ ವಾರ್ತೆ ವಿಜಯಪುರ ಬಸ್ ಪ್ರಯಾಣ ದರದಲ್ಲಿ ಶೇ.೧೫ ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡರಪ್ರಭ ವಾರ್ತೆ ವಿಜಯಪುರ
ಬಸ್ ಪ್ರಯಾಣ ದರದಲ್ಲಿ ಶೇ.೧೫ ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಗಾಂಧಿ ವೃತ್ತದಿಂದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕೇಂದ್ರ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ಸಾರಿಗೆ ಅಭಿಯಂತರರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.೧೫ ರಷ್ಟು ಹೆಚ್ಚಳ ಮಾಡುವುದರ ಮೂಲಕ ಬಡ, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನತೆಯ ಮೇಲೆ ಮತ್ತಷ್ಟು ಹೊರೆಯನ್ನು ಹೇರಿದಂತಾಗಿದೆ. ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಆದರೆ, ಶೇ.೧೫ ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವುದರ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಹಾಕುತ್ತಿದೆ ಎಂದು ದೂರಿದರು.ಶಕ್ತಿ ಯೋಜನೆಯಿಂದಾಗಿ ದಿನನಿತ್ಯ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಇದೆ. ಆದರೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ವಿದ್ಯಾರ್ಥಿಗಳ ಶಾಲಾ-ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಹಲವಾರು ಬಸ್‌ಗಳಲ್ಲಿ ಸ್ಥಳಾವಕಾಶ ಇಲ್ಲದೆ ಬಸ್‌ಗಳನ್ನು ನಿಲ್ಲಿಸಿದ ಉದಾಹರಣೆಗಳು ಇವೆ. ಇದರಿಂದ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ, ಸರ್ಕಾರ ಕೂಡಲೇ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಪ್ರಯಾಣಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಸುಜ್ಞಾತಾ ಕುಲಕರ್ಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸ್ನೇಹಾ ಹಿರೇಮಠ, ಐಶ್ವರ್ಯ ಆಸಂಗಿ, ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಗಿ, ಚೇತನ ಕೊರವಾರ, ಅಭಿಷೇಕ ಬಡಿಗೇರ, ಮಹೇಶಗೌಡ ಮಿರ್ಜಿ, ಸುರೇಶ ಲೋಣಾರ, ಕಾರ್ತಿಕ ಮಾಳಿ, ಆನಂದ ಪೂಜಾರಿ, ಪ್ರತೀಕ, ಪ್ರವೀಣ ತನಕೇದಾರ, ಗಣೇಶ, ದಾನಮ್ಮ ತಾರನಾಳ, ಶಂಕರ ಮಾವಿನಮರದ, ಶ್ರೀನಾಥ, ವಿನೋದ, ಆಕಾಶ, ಶ್ರವಣ ರಾಠೋಡ, ಚಂದನ, ವೆಂಕಟೇಶ, ಶಶಿಕಾಂತ, ಮೋಹನ, ಸೋನಾಲಿ, ಶಿಲ್ಪಾ ಪೂಜಾರಿ ಮುಂತಾದವರು ಇದ್ದರು.