ಗದಗ: ಕಳೆದ ಎರಡೂವರೆ ವರ್ಷಗಳಿಂದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಅಂದಾಜು ₹38000 ಕೋಟಿ ಬಾಕಿ ಮೊತ್ತವನ್ನು ಸರ್ಕಾರ ತಡೆಹಿಡಿದಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಗುತ್ತಿಗೆದಾರರ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ. ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ. 6ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕೋಪಯೋಗಿ ಮತ್ತು ಬಿಬಿಎಂಪಿ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಹಣ ಬಿಡುಗಡೆಯ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಿದ್ದಾಗ ಗುತ್ತಿಗೆದಾರರ ನೋವಿಗೆ ಸ್ಪಂದಿಸಿದ್ದರು. ಸಿಎಂ ಆದ ನಂತರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರ ಜತೆ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಿದ್ದೇವು. ಸಭೆ ದಿನಾಂಕ ನಿಗದಿಯಾಗಿತ್ತು. ಆದರೆ ಮೂರು ಬಾರಿ ಸಭೆ ಮುಂದೂಡಲಾಗಿದೆ ಎಂದರು.ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ವಿಷಾದನೀಯ. ವ್ಯಾಟ್(ಶೇ. 4)ನಿಂದ ಜಿಎಸ್ಟಿ (ಶೇ.12)ಗೆ ಬದಲಾದ ಸಂದರ್ಭದ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸುವುದಾಗಿ ಹೇಳಿತ್ತು. ಆರ್ಥಿಕ ಇಲಾಖೆಯಿಂದ ಇನ್ನೂ ಅಧಿಕೃತ ಆದೇಶ ಹೊರಬಂದಿಲ್ಲ. ನೆರೆಯ ರಾಜ್ಯಗಳಲ್ಲಿ ಇದು ಐದು ವರ್ಷಗಳ ಹಿಂದೆಯೇ ಜಾರಿಯಾಗಿದೆ.ನಗರಾಭಿವೃದ್ಧಿ ಇಲಾಖೆಯ ಚಟುವಟಿಕೆಗಳು ಖಾಸಗಿ ಕಚೇರಿಗಳಿಂದ, ಮಧ್ಯವರ್ತಿಗಳ ಮೂಲಕ ನಡೆಯುತ್ತಿವೆ. ಟೆಂಡರ್ ಅನುಮೋದನೆ ಮತ್ತು ಹಣ ಬಿಡುಗಡೆ ವ್ಯವಸ್ಥೆಯು ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚು ಅಸ್ತವ್ಯಸ್ತಗೊಂಡಿದೆ. ಸಣ್ಣ ಗುತ್ತಿಗೆದಾರರಿಗೆ ಅನ್ಯಾಯ ಆಗುತ್ತಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್ ಪದ್ಧತಿ ಜಾರಿಗೆ ತಂದಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು ಜೀವನೋಪಾಯ ಕಳೆದುಕೊಳ್ಳುತ್ತಿದ್ದಾರೆ.
ಫೆಬ್ರವರಿ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳು ಅಧಿಕೃತ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಈ ವಿಷಯವನ್ನು ರಾಜ್ಯಪಾಲರು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಗಮನಕ್ಕೂ ತರಲಾಗುವುದು ಎಂದರು.ಜಿಲ್ಲಾಧ್ಯಕ್ಷ ಸಿದ್ದು ಪಾಟೀಲ, ಆರ್.ವಿ. ಮುಲ್ಕಿಪಾಟೀಲ, ಆಂಜನೇಯ ಕಟಗಿ, ರಮೇಶ ರಂಗಪ್ಪನ್ನವರ, ಆನಂದಗೌಡ ಪಾಟೀಲ, ಬಸವರಾಜ ಶಿರಗುಂಪಿ, ಸುರೇಶ ತಿರ್ಲಾಪುರ, ಬಸವರಾಜ ಮೇಟಿ, ಸಿ.ಎಸ್. ನಾಗಾವಿ, ಬಿ.ಆರ್. ಹೊಸಮನಿ, ಮಾದಣ್ಣವರ ಇತರರು ಇದ್ದರು.ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ ಮಾತನಾಡಿದರು.