ಅಧ್ಯಯನದ ಸಮಾರೋಪ ಸಮಾರಂಭ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸಿದ್ದಾಪುರನಾವು ಆರೋಗ್ಯವಾಗಿದ್ದರೆ ಏನನ್ನಾದರೂ ಸಾಧಿಸಬಹುದು. ಕೇವಲ ರೋಗ ಇಲ್ಲದಿರುವುದು ಆರೋಗ್ಯದ ಲಕ್ಷಣವಲ್ಲ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮತೋಲನ ಇದ್ದರೆ ಮಾತ್ರ ಆರೋಗ್ಯವಂತ ಎನಿಸಿಕೊಳ್ಳುತ್ತಾನೆ ಎಂದು ಶಿರಸಿ ಗಣೇಶ ನೇತ್ರಾಲಯದ ಕಣ್ಣಿನ ತಜ್ಞ ಡಾ. ಕೆ. ವಿ. ಶಿವರಾಮ ಹೇಳಿದರು. ಪಟ್ಟಣದ ಸಿದ್ಧಿವಿನಾಯಕ ಪ್ರೌಢಶಾಲಾ ಆವರಣದಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್, ಸಿದ್ದಾಪುರ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಎಂ.ಎಂ. ಜೋಶಿ, ಗಣೇಶ ನೇತ್ರಾಲಯ ಸಹಯೋಗದೊಂದಿಗೆ ಹಮ್ಮಿಕೊಂಡ ಥ್ರೋಬಾಲ್ ಮೂಲಕ ರಿಪ್ಲೆಕಾಲಜಿ ಮತ್ತು ದೈಹಿಕ ಚಟುವಟಿಕೆಗಳ ಪರಿಣಾಮ-ಕಣ್ಣಿನ ಆರೋಗ್ಯ ನಿರ್ವಹಣೆ, ಶೈಕ್ಷಣಿಕ ಸಾಧನೆ ಹಾಗೂ ದೈಹಿಕ ಆರೋಗ್ಯದ ಮೇಲೆ ಅದರ ಪ್ರಭಾವದ ಕುರಿತಾದ ಅಧ್ಯಯನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೇವಲ ಪರೀಕ್ಷೆಗಳಲ್ಲಿ ಅಂಕ ಪಡೆಯುವುದಷ್ಟೇ ಮುಖ್ಯವಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕಾರಣ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯ. ಕ್ರೀಡೆಗಳು ಸೃಜನಶೀಲತೆ ಹೆಚ್ಚಿಸುವುದರ ಮೂಲಕ ಸಂತೋಷವನ್ನು ಹೆಚ್ಚಿಸುತ್ತದೆ. ಬುದ್ಧಿಶಕ್ತಿ, ಕ್ರಿಯಾಶಕ್ತಿ ಮತ್ತು ಇಚ್ಛಾಶಕ್ತಿ ಕ್ರೀಡೆಯಿಂದ ಹೆಚ್ಚುತ್ತದೆ ಎಂದರು. ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜಾರಾಮ್ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಬೆಂಗಳೂರಿನ ಸಹಾಯಕ ನಿರ್ದೇಶಕಿ ನೂತನಾ ದೋಶೆಟ್ಟಿ, ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಾಣಿ ಜೀರಗಲ್ ಮಾತನಾಡಿದರು. ಪಟ್ಟಣದ ಸಿದ್ಧಿವಿನಾಯಕ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅರುಣ್ ಭಾಗ್ವತ್, ಪಟ್ಟಣದ ಹಾಳದಕಟ್ಟಾ ಅಂಧರ ಶಾಲೆಯ ಖಜಾಂಜಿ ನಾಗರಾಜ ದೋಶೆಟ್ಟಿ ವೇದಿಕೆಯಲ್ಲಿದ್ದರು. ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಸಹಾಯಕ ಕಾರ್ಯದರ್ಶಿ ಸಂಪೂರ್ಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಕ ಉಮೇಶ್ ಸ್ವಾಗತಿಸಿದರು. ರಜನಿ ಹೆಗಡೆ ನಿರೂಪಿಸಿದರು.