ಸಾರಾಂಶ
ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸಿರುವುದರ ಜತೆಗೆ ಅಷ್ಟಿಷ್ಟು ಬಂದ ಮೆಕ್ಕೆಜೋಳ ಕೈಗೆ ಬರುವ ಹೊತ್ತಿಗೆ ದರ ಕುಸಿತ ರೈತರನ್ನು ಕಂಗಾಲಾಗಿಸಿದೆ. ಅದಕ್ಕಾಗಿ ಸರ್ಕಾರವೇ ಖರೀದಿ ಕೇಂದ್ರ ತೆರೆದು ಕ್ವಿಂಟಲ್‌ಗೆ ₹3 ಸಾವಿರದಂತೆ ಮೆಕ್ಕೆಜೋಳ ಖರೀದಿಸಬೇಕು ಎಂಬ ರೈತರ ಒತ್ತಾಯ ಹೆಚ್ಚುತ್ತಿದೆ.ಜಿಲ್ಲೆಯ ಪ್ರಮುಖ ಬೆಳೆ ಮೆಕ್ಕೆಜೋಳವನ್ನು ಅತಿವೃಷ್ಟಿಯ ಮಧ್ಯೆಯೂ ಈ ವರ್ಷ ಒಟ್ಟು ಸುಮಾರು ೨.೭೪ ಲಕ್ಷ ಹೆಕ್ಟೇರ್ ಗೋವಿನಜೋಳ ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಇಳುವರಿ ಕಡಿಮೆ ಎಂದು ರೈತರು ಹೇಳುತ್ತಾರೆ. ಅಲ್ಲದೇ ಧಾರಣೆ ಕೂಡ ಕುಸಿದಿರುವುದರಿಂದ ರೈತರನ್ನು ಆರ್ಥಿಕವಾಗಿ ಮತ್ತಷ್ಟು ಕುಂದಿಸಿದೆ. ಜಿಲ್ಲೆಯ ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇ. ೭೫ರಷ್ಟು ಗೋವಿನ ಜೋಳ ಬೆಳೆಯುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗೋವಿನ ಜೋಳದ ಬೆಲೆ ಕುಸಿದಿದೆ. ಪ್ರತಿ ಕ್ವಿಂಟಲ್‌ಗೆ ಸರಾಸರಿ ₹೧,೪೦೦ರಿಂದ ₹೧,೯೦೦ಕ್ಕೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ಗೋವಿನ ಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹೨,೪೦೦ ಬೆಂಬಲ ಬೆಲೆ ಘೋಷಿಸಿರುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ.ದರ ಕುಸಿತದಿಂದ ರೈತರಿಗೆ ನಷ್ಟ: ಪ್ರಸಕ್ತ ವರ್ಷ ಅತಿವೃಷ್ಟಿ, ಮುಳ್ಳು ಸಜ್ಜೆ ಕಳೆಯಿಂದ ಮೆಕ್ಕೆಜೋಳಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶ ಲಭ್ಯವಾಗದೆ ಇಳುವರಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಪ್ರತಿ ಎಕರೆಗೆ ಸರಾಸರಿ ೧೫-೨೦ ಕ್ವಿಂಟಲ್ ಬರುವ ಇಳುವರಿ ಈ ವರ್ಷ ೯-೧೦ ಕ್ವಿಂಟಲ್‌ಗೆ ಕುಸಿದಿದೆ. ಅಲ್ಲದೇ ಕೊಯ್ಲಿನ ಬಳಿಕವೂ ಮಳೆ ಸುರಿಯುತ್ತಲೇ ಇರುವ ಕಾರಣ ಸಂಸ್ಕರಣೆಯ ಹಂತದಲ್ಲಿ ಬಹಳಷ್ಟು ಬೆಳೆಗೆ ಫಂಗಸ್ ಹಿಡಿದು ಹಾನಿಯಾಗಿದೆ.ಇನ್ನು, ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೂಲಿ ಸೇರಿ ಸರಾಸರಿ ₹೧೦ ಸಾವಿರ ಮತ್ತು ನಿರ್ವಹಣೆಗೆ ಸರಾಸರಿ ₹೫-೮ ಸಾವಿರ ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಕ್ಕೆಜೋಳವೇ ಪ್ರತಿ ಕ್ವಿಂಟಲ್‌ಗೆ ₹೧೯೦೦ ದರವಿದ್ದರೆ ಸಾಮಾನ್ಯ ಮೆಕ್ಕೆಜೋಳ ₹೧೪೦೦ ಇದೆ. ಇನ್ನು ತೇವಾಂಶಕ್ಕೆ ಸಿಲುಕಿದ ಕಾಳನ್ನು ₹೮೦೦ಗೂ ಕೇಳುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಕೇಂದ್ರ ತೆರೆಯಲು ಸಮಸ್ಯೆಯೇನು?: ಈ ವರ್ಷ ದರ ಕುಸಿತವಾಗಿರುವ ಕಾರಣ ಕೂಡಲೇ ಖರೀದಿ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಆದರೆ ಮೆಕ್ಕೆಜೋಳವನ್ನು ಪಡಿತರದ ಪಟ್ಟಿಯಲ್ಲಿ ಸೇರದಿರುವುದರಿಂದ ಖರೀದಿ ಕೇಂದ್ರದ ಆರಂಭಕ್ಕೆ ತೊಡಕಾಗುತ್ತಿದೆ. ಮೆಕ್ಕೆಜೋಳದಲ್ಲಿ ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಕಳೆದ ಕೆಲವು ವರ್ಷದ ಹಿಂದೆ ಅದನ್ನು ಪಡಿತರದ ಮೂಲಕ ವಿತರಿಸಲು ಕೇಂದ್ರ ಆಹಾರ ಇಲಾಖೆ ರಾಜ್ಯಗಳಿಗೆ ಆದೇಶ ಹೊರಡಿಸಿದೆ. ಒಂದೊಮ್ಮೆ ಕರ್ನಾಟಕದಲ್ಲಿ ಖರೀದಿ ಕೇಂದ್ರ ಆರಂಭಿಸಿದರೆ ಸರ್ಕಾರ ಖರೀದಿಸಿದ ಮೆಕ್ಕೆಜೋಳವನ್ನು ಸ್ಥಳೀಯವಾಗಿಯೇ ಪಡಿತರದ ಮೂಲಕ ಜನರಿಗೆ ಮಾರಾಟ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಮೆಕ್ಕೆಜೋಳವನ್ನು ಅಡುಗೆಗೆ ಬಳಸುವುದಿಲ್ಲ, ಅದಕ್ಕಾಗಿ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಕ್ಕೆ ಮುಂದಾಗುತ್ತಿಲ್ಲ.
ಕೇಂದ್ರ ಸರ್ಕಾರದ ಆಹಾರ ಇಲಾಖೆಯ ಪರಿಷ್ಕೃತ ನಿಯಮದ ಪ್ರಕಾರ ಮೆಕ್ಕೆಜೋಳದಂತಹ ಧಾನ್ಯಗಳನ್ನು ಸಾರ್ವಜನಿಕ ವಿತರಣೆ ಪದ್ಧತಿ (ಪಿಡಿಎಸ್) ಗಾಗಿ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಬಹುದು. ಆದರೆ, ರಾಜ್ಯದಲ್ಲಿ ಪ್ರಸ್ತುತ ಮೆಕ್ಕೆಜೋಳವನ್ನು ಪಿಎಸ್‌ಡಿ ಅಡಿಯಲ್ಲಿ ವಿತರಣೆ ಮಾಡುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ನೋಡುವಂತಾಗಿದೆ. ₹3 ಸಾವಿರದಂತೆ ಖರೀದಿಸಿ: 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮೆಕ್ಕೆಜೋಳವನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಿತ್ತು. ಆದರೆ, ಜಿಲ್ಲೆ ಹೊರಜಿಲ್ಲೆಗಳ ಗೋದಾಮುಗಳಲ್ಲಿ ವರ್ಷಗಟ್ಟಲೆ ದಾಸ್ತಾನು ಮಾಡಿ ಹುಳ ಬಿದ್ದಿತ್ತು. ಬಳಿಕ ಖರೀದಿಸಿದ್ದಕ್ಕಿಂತ ಕಡಿಮೆ ದರದಲ್ಲಿ ಹರಾಜು ಹಾಕಿತ್ತು. ಆದರೆ, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ವಿಂಟಲ್‌ಗೆ ₹600 ಹಾಗೂ ಎಂಎಸ್‌ಪಿ ₹2400 ಸೇರಿ ₹3 ಸಾವಿರದಂತೆ ಖರೀದಿ ಮಾಡಬೇಕು ಎಂಬುದು ರೈತರ ಹಕ್ಕೊತ್ತಾಯವಾಗಿದೆ.ರಾಜ್ಯ ಸರ್ಕಾರ ಪಡಿತರ ಪಟ್ಟಿಯಿಂದ ಮೆಕ್ಕೆಜೋಳವನ್ನು ಕೈ ಬಿಡುವಂತೆ ಕೇಂದ್ರಕ್ಕೆ ಸೂಚಿಸಬೇಕು, ಮೆಕ್ಕೆಜೋಳ ಮೊದಲೆಲ್ಲ ಕೇವಲ ಪಶು ಆಹಾರಕ್ಕೆ ಮಾತ್ರ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಎಥೆನಾಲ್ ತಯಾರಿಕೆಗೂ ಬಳಸಲಾಗುತ್ತಿದ್ದು, ಬಹೂಪಯೋಗಿ ಬೆಳೆಯಾಗಿ ಪರಿಣಮಿಸಿದೆ. ಪಡಿತರದ ಬದಲು ಎಥೆನಾಲ್ ತಯಾರಿಕೆಗೂ ಒದಗಿಸಬಹುದಾಗಿದೆ. ಈ ಕಾರ್ಯ ಆದಲ್ಲಿ ಖರೀದಿ ಕೇಂದ್ರ ಆರಂಭಿಸಲು ಅನುಕೂಲವಾಗುತ್ತದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ಆರಂಭಕ್ಕೆ ಮುಂದಾಗಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಸರ್ಕಾರದ ಆದೇಶ ಬಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
;Resize=(128,128))
;Resize=(128,128))