ಸಾರಾಂಶ
ಹುಬ್ಬಳ್ಳಿ: ದೇಶಾದ್ಯಂತ ಮತಗಳ್ಳತನ ಕುರಿತು ಜಾಗೃತಿ ಮೂಡಿಸಿದರೂ ಚುನಾವಣಾ ಆಯೋಗ ದುರ್ನಡತೆ ತೋರಿದೆ. ಆಯೋಗ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಚುನಾವಣಾ ಆಯೋಗ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ದೊಡ್ಡದಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಹಾರ ಚುನಾವಣೆ ಫಲಿತಾಂಶ ಕುರಿತಂತೆ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಚರ್ಚಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಮನ ಹರಿಸಲಾಗುತ್ತಿದೆ. ಅದು ಕಾನೂನಿನಡಿ ಕಾರ್ಯ ಮಾಡುತ್ತಿಲ್ಲ. ಸತ್ಯ ಕಂಡುಹಿಡಿಯಬೇಕು, ಸತ್ಯ ಜನರಿಗೆ ತಿಳಿಸಬೇಕು ಎಂಬ ವಿಚಾರ ಚುನಾವಣಾ ಆಯೋಗಕ್ಕಿಲ್ಲ. ಈ ವರ್ತನೆ ಸರಿಯಲ್ಲ ಎಂದು ಹರಿಹಾಯ್ದರು.ಬೆಳಗಾವಿ ಅಧಿವೇಶನಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿವೇಶನದಲ್ಲಿ 20 ಬಿಲ್ ಮಂಡನೆಯಾಗಲಿವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗ ಸೇರಿದಂತೆ ವಿವಿಧ ರಾಜ್ಯದ ಅಭಿವೃದ್ಧಿ ಹಿನ್ನೆಲೆ ವಿಧಾನಮಂಡಲ ಉಭಯ ಸದನಗಳಲ್ಲಿ ಬಿಲ್ ಮಂಡನೆ ಮಾಡಿ ಬಳಿಕ ಅನುಮೋದನೆ ಪಡೆಯಲಾಗುವುದು. ಯಾವುದೇ ಅಭಿವೃದ್ಧಿಗೆ ಪ್ರಾದೇಶಿಕ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಚ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಕುರಿತಾದ ಚರ್ಚೆ ವಿಚಾರ ಕುರಿತು ನನಗೆ ಮಾಹಿತಿಯಿಲ್ಲ. ನಾನು ಯಾವುದೇ ಹಿರಿಯ ನಾಯಕರ ಜತೆಗೆ ಅಥವಾ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆಗೆ ಈ ವಿಚಾರ ವಿನಿಮಯ ಮಾಡಿಕೊಂಡಿಲ್ಲ ಎಂದರು.ಬಿಹಾರ ಚುನಾವಣಾ ಫಲಿತಾಂಶ ಇಂಡಿ ಕೂಟಕ್ಕೆ ಭಾರೀ ಹಿನ್ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹಾಗೂ ಇಂಡಿ ಗಠಬಂಧನಕ್ಕೆ ದೊಡ್ಡ ಹಿನ್ನಡೆಯಾಗಿರುವುದು ನಿಜ. ಈ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಇಷ್ಟೊಂದು ಹಿನ್ನಡೆಯಾಗುತ್ತದೆ ಎಂದು ಊಹೆ ಮಾಡಿರಲಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಆದರೆ, ಚುನಾವಣಾ ಆಯೋಗ ಸರಿಯಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.
;Resize=(128,128))
;Resize=(128,128))