ಗ್ರಾಪಂ 11 ವೃಂದಗಳ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ ಶುರು

| Published : Oct 08 2024, 01:15 AM IST

ಗ್ರಾಪಂ 11 ವೃಂದಗಳ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯಿತಿ ಕುಟುಂಬದ ಎಲ್ಲ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ 11 ವೃಂದಗಳ ನೌಕರರು ಸೋಮವಾರ ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

- ಎಲ್ಲ ಸಮಸ್ಯೆಗಳಿಗೂ ನೇರ ಹೊಣೆಗಾರರಾಗಿಸುವ ಸರ್ಕಾರ, ಇಲಾಖೆ ಧೋರಣೆ ಖಂಡಿಸಿದ ನೌಕರರು - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಮ ಪಂಚಾಯಿತಿ ಕುಟುಂಬದ ಎಲ್ಲ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ 11 ವೃಂದಗಳ ನೌಕರರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ರಾಜ್ಯಾದ್ಯಂತ ಗ್ರಾಪಂ ಸೇವೆ ಸ್ಥಗಿತಗೊಳಿಸಿ ಅ.4ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಪ್ರಾರಂಭವಾಗಿದ್ದು, ಇದೀಗ ಜಿಲ್ಲೆಯಲ್ಲೂ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಗಿದೆ.

ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಸಂಗಮೇಶ್ ಮಾತನಾಡಿ, ನೌಕರರು ಎದುರಿಸುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸುಮಾರು ವರ್ಷಗಳಿಂದ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಯಾವುದಕ್ಕೂ ಸ್ಪಂದಿಸದೇ, ಎಲ್ಲ ಸಮಸ್ಯೆಗಳಿಗೂ ಪಿಡಿಒ ಹಾಗೂ ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಸರ್ಕಾರ ಮತ್ತು ಇಲಾಖೆಯ ಈ ಧೋರಣೆ ಖಂಡನೀಯ ಎಂದು ದೂರಿದರು.

ರಾಜ್ಯದ ಎಲ್ಲ ಪಿಡಿಒ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ''''ಬಿ'''' ದರ್ಜೆಗೆ ಉನ್ನತೀಕರಿಸಬೇಕು. ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ಒಂದೆಡೆ 7 ವರ್ಷದಿಂದ ಕರ್ತವ್ಯ ಪೂರೈಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈ ಬಿಡುವುದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಸಂಘದ ಸಲಹೆ ಪಡೆಯಬೇಕು ಎಂದರು.

ಗ್ರೇಡ್-1 ಕಾರ್ಯದರ್ಶಿಗಳಿಗೆ, ಪಿಡಿಒ ಪದೋನ್ನತಿಯನ್ನು ಜಿಲ್ಲಾ ಮಟ್ಟದಲ್ಲಿ ಕೊಡುವುದು ಮತ್ತು ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು, ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಅಗ್ರಹಿಸಿದರು.

ಗ್ರಾಪಂ ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತಾಗಲು ಗ್ರಾಪಂ ಅಧ್ಯಕ್ಷರು ಕಾರ್ಯನಿರ್ವಾಹಕ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವಂತಾಗಲು ಹಾಗೂ ಪಿಡಿಒ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಗ್ರಾಪಂ ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು ಎಂದರು.

ಜಿಪಂ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮೀಸಲಿಡುವುದು ಸೇರಿದಂತೆ ಗ್ರಾಪಂ ಕುಟುಂಬದ ಎಲ್ಲ ನೌಕರರ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿದರು.

ಒಕ್ಕೂಟದ ಅಧ್ಯಕ್ಷ ವೀರೇಶ, ಜಿಲ್ಲಾ ಡಿಇಒ ಸಂಘದ ಅಧ್ಯಕ್ಷ ಸಿದ್ದೇಶ, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ, ಎಸ್‌ಡಿಎ ಸಂಘದ ಅಧ್ಯಕ್ಷ ಆನಂದ, ಜಿಲ್ಲಾ ಸಂಘದ ಖಜಾಂಚಿ ಮರುಳಸಿದ್ದಪ್ಪ, ದಾವಣಗೆರೆ ತಾಲೂಕು ಸಂಘದ ಅಧ್ಯಕ್ಷ ಲೋಹಿತ್, ಹೊನ್ನಾಳಿ ತಾಲೂಕು ಅಧ್ಯಕ್ಷ ಅರುಣ, ನ್ಯಾಮತಿ ತಾಲೂಕು ಸಂಘದ ಅಧ್ಯಕ್ಷ ವಿಜಯ್, ಜಗಳೂರು ತಾಲೂಕು ಅಧ್ಯಕ್ಷ ವಾಸುದೇವ, ಬಿಲ್ ಕಲೆಕ್ಟರ್ ಹಾಲೇಶ, ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ, ಗ್ರಾಪಂ ಸದಸ್ಯರ ಒಕ್ಕೂಟ, ಕರ್ನಾಟಕ ಗ್ರಾಪಂ ಇಲಾಖೆ ಪತ್ರಾಂಕಿತ ಅಧಿಕಾರಿಗಳ ಸಂಘ, ಗ್ರೇಡ್ 1, ಗ್ರೇಡ್ 2 ಕಾರ್ಯದರ್ಶಿಗಳ ಸಂಘ, ಕರಾಗ್ರಾಪಂ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ನೌಕರರ ಸಂಘ, ಕರ ವಸೂಲಿಗಾರರ ನೌಕರರರ ಸಂಘ, ನೀರಗಂಟಿ ವೃಂದ ಸಂಘ, ಜವಾನರ ವೃಂದ ಸಂಘ, ಸ್ವಚ್ಛತಾಗಾರರ ವೃಂದ ಸಂಘದ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.

- - - -7ಕೆಡಿವಿಜಿ45, 46ಃ:

ದಾವಣಗೆರೆಯಲ್ಲಿ ಸೋಮವಾರ ಗ್ರಾಪಂ ಕುಟುಂಬದ ನೌಕರರು ಜಿಪಂ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.