ಸಾರಾಂಶ
ಧಾರವಾಡದ ಸಿ.ಎಸ್. ಪಾಟೀಲ ಭವನದಲ್ಲಿ ಶನಿವಾರ ಧಾರವಾಡ-71 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಸಮರ್ಪಣಾ ಕಾರ್ಯಕ್ರಮ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಧಾರವಾಡ: ತಮ್ಮ ಐದು ಬಾರಿಯ ಗೆಲವಿಗೆ ಹಾಗೂ ಬಿಜೆಪಿ ದಿಗ್ವಿಜಯಕ್ಕೆ ಪ್ರತಿಯೊಬ್ಬ ಬೂತ್ ಮಟ್ಟದ ಕಾರ್ಯಕರ್ತರ ಸತತ ಪರಿಶ್ರಮವೇ ಕಾರಣ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ತಾವೆಲ್ಲರೂ ಒಗ್ಗೂಡಿ ಮನೆಮನೆಗೆ ತೆರಳಿ ಇನ್ನಷ್ಟು ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಸಿ.ಎಸ್. ಪಾಟೀಲ ಭವನದಲ್ಲಿ ಶನಿವಾರ ಧಾರವಾಡ-71 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಸಮರ್ಪಣಾ ಕಾರ್ಯಕ್ರಮ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರು ಕನಿಷ್ಠ ನೂರು ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಸಕ್ರಿಯ ಕಾರ್ಯಕರ್ತರಾಗಬೇಕು. ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವಗುರುವಾಗುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದ್ದು, 2047ರಲ್ಲಿ ಅದು ಈಡೇರಬೇಕಿದೆ. ತಾವೆಲ್ಲರೂ ಪಕ್ಷವನ್ನು ಇನ್ನೂ ಬಲಪಡಿಸಿ ಮೋದಿಯವರ ಕೈಬಲಪಡಿಸಬೇಕೆಂದು ನುಡಿದರು.ಪಕ್ಷದ ಜಿಲ್ಲಾಧ್ಯಕ್ಷರು, ಮಂಡಳ ಅಧ್ಯಕ್ಷರು ಹಾಗೂ ಮಹಿಳಾ ಕಾರ್ಯಕರ್ತರನ್ನು ಕೇಂದ್ರ ಸಚಿವರು ಅಭಿನಂದಿಸಿದರು.
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ, ಎಸ್.ವಿ. ಸಂಕನೂರ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ಮಾಜಿ ಮೇಯರ್ ಈರೇಶ ಅಂಚಟಗೇರಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಂಡಳ ಅಧ್ಯಕ್ಷ ಸುನೀಲ ಮೋರೆ, ರುದ್ರಪ್ಪ ಅರಿವಾಳ, ಜಯತೀರ್ಥ ಕಟ್ಟಿ, ಸವಿತಾ ಅಮರಶೆಟ್ಟಿ, ಗುರುನಾಥಗೌಡರ, ಸಂಗನಗೌಡ ರಾಮನಗೌಡರ, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ ಇದ್ದರು.