ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಜನಪ್ರತಿನಿಧಿಗಳ ಅತಿಯಾದ ಮೂಗು ತೂರಿಸುವಿಕೆಯಿಂದಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಧಕ್ಕೆ ತಂದುಕೊಂಡಿದೆ ಎಂಬ ಆರೋಪ ಹೊತ್ತಿದ್ದ ಚಿತ್ರದುರ್ಗ ನಗರಸಭೆ ದೈನೇಸಿ ಪರಿಸ್ಥಿತಿಯಿಂದ ಹೊರ ಬರುವುದೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ. ಹದಿನಾರು ತಿಂಗಳ ನಂತರ ಸೋಮವಾರ ನಗರ ಸಭೆ ಸಾಮಾನ್ಯ ಸಭೆ ನಡೆಯಲಿದ್ದು ಚರ್ಚೆಗೆ ನೂರಾರು ಸಮಸ್ಯೆಗಳು ಸರತಿಯಲ್ಲಿವೆ.
ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್‌ಗಳು, ಕಳಪೆ ಸಿಸಿ ರಸ್ತೆ, ಚರಂಡಿಗಳು ನಿರ್ಮಾಣವಾಗಿದ್ದು ಇದುವರೆಗೂ ಕೂಡಾ ನಗರಸಭೆಗೆ ಹಸ್ತಾಂತರವಾಗಿಲ್ಲ. ಕಾಮಗಾರಿ ಆರಂಭಿಸುವ ಮೊದಲು ನಗರಸಭೆ ಅನುಮತಿ ಪಡೆದಿಲ್ಲ ಎಂದು ಕಳೆದ ಒಂದು ವರ್ಷದಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳಪೆ ಕಾಮಗಾರಿ ಮಾಡಿ ಗಾಯಬ್ ಆದವರಿಂದಾಗಿ ನಿತ್ಯವೂ ನಗರಸಭೆ ಅಧಿಕಾರಿಗಳು ಜನರಿಂದ ಬೈಯಿಸಿಕೊಳ್ಳುವಂತಾಗಿದೆ.ಡಿವೈಡರ್ ಒಳಗೆ ನೆಟ್ಟಿರುವ ವಿದ್ಯುತ್ ಕಂಬಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಹಾರೆ, ಗುದ್ದಲಿ, ಪಿಕಾಸಿಗಳನ್ನು ಹಾಕಿ ಸಿಸಿ ರಸ್ತೆಗಳ ಅಗೆಯಲಾಗುತ್ತಿದ್ದು, ಸಿಸಿ ರಸ್ತೆಗಳ ಅಂಚಿನಲ್ಲಿ ಅಳವಡಿಸಲಾಗುತ್ತಿರುವ ವಿದ್ಯುತ್ ಕಂಬಗಳಿಗೂ ರಸ್ತೆಗಳು ಬಲಿಯಾಗುತ್ತಿವೆ. ಎಲ್ಲಿ ನೋಡಿದರೂ ಗುಂಡಿಗಳೇ ರಾರಾಜಿಸುತ್ತಿದ್ದು, ಸಿಸಿ ರಸ್ತೆ ನಿರ್ಮಾಣದ ಉದ್ದೇಶ ಸಫಲವಾಗಿಲ್ಲ.
ಚಿತ್ರದುರ್ಗ ನಗರದ ಬಹುತೇಕ ಕಡೆ ಹೊಸದಾಗಿ ನಿರ್ಮಾಣವಾಗುತ್ತಿರುವ ಹಾಗೂ ನಿರ್ಮಾಣಗೊಂಡಿರುವ ಕಟ್ಟಡಗಳು ನೀಲನಕ್ಷೆ ಉಲ್ಲಂಘಿಸಿವೆ. ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಾಗಿ ಅಕ್ರಮ ಕಟ್ಟಡಗಳಾಗಿ ವಿಜೃಂಭಿಸುತ್ತಿವೆ. ಸೆಟ್ ಬ್ಯಾಕ್ ಬಿಡದೆ, ಪಾರ್ಕಿಂಗ್ ಜಾಗಕ್ಕೆ ಅವಕಾಶ ಮಾಡಿಕೊಡಲಾಗಿಲ್ಲ. ವಾಣಿಜ್ಯ ಕಟ್ಟಡ ಕಟ್ಟಿ ಉದ್ಘಾಟನೆಯಾದ ನಂತರ ಪಾರ್ಕಿಂಗ್ ಬಿಟ್ಟುಕೊಳ್ಳಲಾದ ಜಾಗದಲ್ಲಿಯೂ ಸಹಿತ ಕಟ್ಟಡ ಕಟ್ಟಿ ಬಾಡಿಗೆ ನೀಡಲಾಗಿದೆ. ಇವೆಲ್ಲ ನಗರ ಸೌಂದರ್ಯಕ್ಕೆ ಧಕ್ಕೆಯಾಗಿದ್ದು ಸುಗಮ ಸಂಚಾರಕ್ಕೂ ಅಡ್ಡಿಯಾಗಿವೆ. ಇಂತಹ ಅಕ್ರಮ ಕೋರರ ತಹಬದಿಗೆ ತರುವುದು ಅನಿವಾರ್ಯ. ದಂಡದ ರೂಪದಲ್ಲಿಯೇ ಹತ್ತಾರು ಕೋಟಿ ರುಪಾಯಿ ಸಂಗ್ರಹಿಸಬಹುದಾಗಿದೆ .ಸ್ವಯಂ ಆಸ್ತಿ ತೆರಿಗೆ ಪಾವತಿಯಲ್ಲಿಯೂ ಕಟ್ಟಡದ ಮಾಲೀಕರು ನಗರಸಭೆಗೆ ವಂಚನೆ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಈ ರೀತಿಯ ಸಾವಿರಾರು ಪ್ರಕರಣಗಳು ನಗರದ ತುಂಬಾ ಕಾಣಿಸುತ್ತಿವೆ. ಸ್ವಯಂ ತೆರಿಗೆ ಪಾವತಿಯಲ್ಲಿಯೂ ಕಟ್ಟಡ ನಿರ್ಮಾಣದ ಸ್ವರೂಪ ಮರೆ ಮಾಚಲಾಗುತ್ತಿದೆ. ಕಂದಾಯ ಅಧಿಕಾರಿಗಳು ಕಟ್ಟು ನಿಟ್ಟಿನ ಪರಿಶೀಲನೆ ಮಾಡುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ.
ಚಿತ್ರದುರ್ಗ ನಗರಕ್ಕೆ ಶಾಂತಿ ಸಾಗರದಿಂದ ಕುಡಿವ ನೀರು ಪೂರೈಕೆಯಾಗುತ್ತಿದ್ದು ದಾರಿಯುದಕ್ಕೂ ಹಳ್ಳಿಗಳು, ತಾಲೂಕು ಕೇಂದ್ರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಪೂರೈಕೆಯ ಪೂರ್ಣ ಪ್ರಮಾಣದ ನಿರ್ವಹಣೆಯನ್ನು ಚಿತ್ರದುರ್ಗ ನಗರಸಭೆ ಮಾಡುತ್ತಿದೆ. ಹೊಳಲ್ಕೆರೆ, ಜಗಳೂರು ಸೇರಿದಂತೆ ಪ್ರಮುಖ ಹಳ್ಳಿಗಳಿಂದ ಕನಿಷ್ಠ 20 ಕೋಟಿ ರುಪಾಯಿಗೂ ಹೆಚ್ಚು ಕುಡಿವ ನೀರಿನ ತೆರಿಗೆ ಹಣ ಚಿತ್ರದುರ್ಗ ನಗರಸಭೆಗೆ ಬರಬೇಕಿದೆ. ಇದನ್ನು ವಸೂಲು ಮಾಡುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಕೂಡಾ ನಗರಸಭೆಗೆ ನೆರವಾಗುತ್ತಿಲ್ಲ. ನಗರಸಭೆ ಆಡಳಿತ ಮಂಡಳಿ ಈ ಬಗ್ಗೆ ಬಿಗಿ ಕ್ರಮ ಕೈಗೊಂಡಲ್ಲಿ ಒಂದಿಷ್ಟು ಇಡಿಗಂಟು ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ. ತನ್ನದೇ ಆದ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳ ಮಾಡಬಹುದಾಗಿದೆ.